ರೈತ ಪ್ರತಿಭಟನೆ+ಲಖೀಂಪುರ್= ಸೋಲು ಆಗಬೇಕಿತ್ತಲ್ಲವೇ?

0
274

ಸನ್ಮಾರ್ಗ ವಾರ್ತೆ

ಏ.ಕೆ. ಕುಕ್ಕಿಲ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆಗೆ ಕಾರಣಗಳು ಏನು?
1. ಕೋಮುಧ್ರುವೀಕರಣ
2. ಜಾತ್ಯತೀತ ಮತಗಳ ವಿಭಜನೆ
3. ಇವಿಎಂ
ಸಾಮಾನ್ಯವಾಗಿ ನಡೆಯುವ ಎಲ್ಲಾ ಚರ್ಚೆಗಳೂ ಈ ಮೂರನ್ನೇ ಕೇಂದ್ರೀಕರಿಸಿ ನಡೆಯುತ್ತಿವೆ ಮತ್ತು ಇದರಲ್ಲಿ ಇವಿಎಂ ಮೇಲಿನ ಚರ್ಚೆ ವರ್ಷಗಳುರುಳಿದಂತೆ ದುರ್ಬಲ ವಾಗುತ್ತಲೂ ಬರುತ್ತಿದೆ. 2009ರಲ್ಲಿ ಇವಿಎಂ ಮೇಲೆ ಮೊಟ್ಟ ಮೊದಲ ಬಾರಿಗೆ ಸಂದೇಹ ವ್ಯಕ್ತ ಪಡಿಸಿದ್ದು ಬಿಜೆಪಿಯೇ. 1998ರಲ್ಲಿ ಮೊದಲ ಬಾರಿ ಪ್ರಯೋಗಾರ್ಥವಾಗಿ ಇವಿಎಂ ಬಳಸಿದ ದೇಶದ ಚುನಾವಣಾ ಆಯೋಗವು 2007ರಲ್ಲಿ ಇದರ ಬಳಕೆಯನ್ನು ಸಾರ್ವತ್ರಿಕಗೊಳಿಸಿತು. ಮಾತ್ರವಲ್ಲ, ಇದಕ್ಕಾಗಿ ಸಂಸತ್ತಿನಿAದ ಅನುಮೋದನೆಯನ್ನೂ ಪಡೆಯಲಾಯಿತು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ನೇತೃತ್ವದ ಯುಪಿಎ. 2009ರಲ್ಲಿ ಇವಿಎಂನ್ನು ದೂರಿದ ಬಿಜೆಪಿ 2014ರಲ್ಲಿ ಅದೇ ಇವಿಎಂ ಮೂಲಕ ನಡೆಸಲಾದ ಚುನಾವಣೆಯಲ್ಲಿ ಗೆಲುವನ್ನೂ ದಾಖಲಿಸಿತು. ಆಗ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದುವು. ಮಾತ್ರವಲ್ಲ, ಇವಿಎಂ ಬಗ್ಗೆ ಸಾಕಷ್ಟು ಪರಿಣಾಮಕಾರಿಯಾದ ಚರ್ಚೆಗಳೂ ನಡೆದುವು. ಈ ಎಲ್ಲ ಸಂದರ್ಭಗಳಲ್ಲೂ ಇವಿಎಂ ಪರ ಬಿಜೆಪಿ ಬಲವಾದ ವಾದ ಮಂಡಿಸಿತಲ್ಲದೇ, ವಿರೋಧಿಗಳನ್ನು ಗೇಲಿ ಮಾಡಲಾ ರಂಭಿಸಿತು. 2019ರ ಲೋಕಸಭಾ ಚುನಾವಣೆಯ ಬಳಿಕವೂ ಇವಿಎಂ ಚರ್ಚೆಗೊಳಗಾಯಿತಾದರೂ, 2014ರಿಂದ 2019 ನಡುವೆ ನಡೆದ ಚರ್ಚೆಗೆ ಹೋ ಲಿಸಿದರೆ ಚರ್ಚೆಯಲ್ಲಿ ಆವೇಶ ಕಡಿಮೆಯಿತ್ತು ಮತ್ತು ಪ್ರತಿಭಟನಾಕಾರರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು. ಆದರೆ,

ಇವಿಎಂ ಚರ್ಚೆಯನ್ನು ಅತ್ಯಂತ ದುರ್ಬಲಗೊಳಿಸಿದ್ದು 2020 ಡಿಸೆಂಬರ್‌ನಲ್ಲಿ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾ ರ್ಪೊರೇಶನ್ ಚುನಾವಣೆ. 150 ಸ್ಥಾನಗಳುಳ್ಳ ಈ ಮುನ್ಸಿಪಾಲಿಟಿಯ ಚುನಾವಣೆಯಲ್ಲಿ ಇವಿಎಂನ ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಲಾಯಿತು. ಮಾತ್ರವಲ್ಲ, ಈ ಚುನಾವಣೆ ನಡೆಯುದಕ್ಕಿಂತ ಮೊದಲು ಮುನ್ಸಿಪಾಲಿಟಿಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 4 ಸ್ಥಾನಗಳು. ತೆಲಂಗಾಣ ರಾಷ್ಟ್ರ ಸಮಿತಿ(TRS)ಯ ಪ್ರಾಬಲ್ಯದ ಈ ಮುನ್ಸಿಪಾಲಿಟಿಯಲ್ಲಿ ಅಸದುದ್ದೀನ್ ಒವೈಸಿ ಪಕ್ಷವು ಎರಡನೇ ಅತೀ ದೊಡ್ಡ ಪಕ್ಷವಾಗಿತ್ತು. ಆದರೆ 2020ರ ಇವಿಎಂ ರಹಿತ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಸಾಧನೆಯನ್ನು ಮಾಡಿತು. ಒಂದು ರೀತಿಯಲ್ಲಿ,
ಇವಿಎಂ ವಿರೋಧಿಗಳ ಜಂಘಾಬಲವನ್ನೇ ಉಡುಗಿಸಿದ ಬೆಳವಣಿಗೆ ಇದು. ಆ ಬಳಿಕದಿಂದ ಇವಿಎಂ ವಿರೋಧ ಧ್ವನಿಗಳು ತಗ್ಗುತ್ತಲೇ ಬಂದುವು. ಈ ಪಂಚ ರಾಜ್ಯ ಫಲಿತಾಂಶದ ಬಳಿಕ ವಂತೂ ವಿರೋಧದ ಧ್ವನಿ ದೊಡ್ಡ ಮಟ್ಟದಲ್ಲಂತೂ ಕೇಳಿಸಿಯೇ ಇಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅತ್ಯಂತ ಕ್ಷೀಣವಾಗಿ ಪ್ರತಿಭಟನೆಯೊಂದನ್ನು ಹಮ್ಮಿಕೊಂಡದ್ದು ಬಿಟ್ಟರೆ ಅಖಿಲೇಶ್ ಆಗಲಿ, ಮಾಯಾವತಿಯಾಗಲಿ ಇವಿಎಂನ್ನು ದೂರಿಯೇ ಇಲ್ಲ. ಆದ್ದರಿಂದ,

ಇವಿಎಂ ಅನ್ನು ಬಿಟ್ಟು ಪಂಚ ರಾಜ್ಯ ಫಲಿತಾಂಶವನ್ನು ವಿಶ್ಲೇಷಣೆಗೊಳಪಡಿಸುವುದೇ ಸೂಕ್ತ. ಅಂದಹಾಗೆ,
ದಿ ಹಿಂದೂ ಪತ್ರಿಕೆ ಚುನಾವಣೋತ್ತರ ಸಮೀಕ್ಷೆಯೊಂದನ್ನು ಪ್ರಕಟಿಸಿದೆ. ಈ ಸಮೀಕ್ಷೆ ಇತರೆಲ್ಲ ಸಮೀಕ್ಷೆಗಳಿಗಿಂತ ಬಹಳ ಭಿನ್ನ ಮತ್ತು ಈ ಕಾರಣಕ್ಕಾಗಿಯೇ ಈ ಸಮೀಕ್ಷೆ ಬಹಳ ಜನಪ್ರಿಯ. `ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್- ಲೋಕ್‌ನೀತಿ ಮತದಾನೋತ್ತರ ಸಮೀಕ್ಷೆ’ (ಸಿಡಿಎಸ್) ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಈ ಸಮೀಕ್ಷಾ ವರದಿ ಸಾಮಾನ್ಯವಾಗಿ ನಡೆಯುವ ಚರ್ಚೆಗಳಿಗೆ ಸಿಗದ ಕೆಲವು ಅಂಶಗಳನ್ನು ಪಟ್ಟಿ ಮಾಡಿ ಹೇಳಿವೆ. ಬಹುಮುಖ್ಯವಾಗಿ ಅದು ಮೂರು ಸಂಗತಿಗಳನ್ನು ಎತ್ತಿ ಹೇಳಿದೆ. ಕೇಂದ್ರ ಸರ್ಕಾರದ ಜನಪ್ರಿಯತೆ, ಕಲ್ಯಾಣ ಕಾರ್ಯಕ್ರಮಗಳ ಸಕಾರಾತ್ಮಕ ಪರಿಣಾಮ ಮತ್ತು ಧಾರ್ಮಿಕ ಧ್ರುವೀಕರಣ- ಇವು ಮೂರು ಅಂಶಗಳು ಪಂಜಾಬ್, ಗೋವಾ ಹೊರತುಪಡಿಸಿ ಉಳಿದ 3 ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದ ನ್ನು ಅದು ಅಂಕಿ-ಅAಶಗಳ ಸಹಿತ ಸ್ಪಷ್ಟಪಡಿಸಿದೆ.

ನಮ್ಮಲ್ಲಿ ಚರ್ಚೆಯಾಗದ ಕೆಲವು ಅಂಶಗಳು ಪಂಚರಾಜ್ಯ ಚುನಾವಣೆಯ ಸಮಯದಲ್ಲಿ ನಡೆದಿವೆ. ಬಿಜೆಪಿಯ ವೈಫಲ್ಯವನ್ನು ಚರ್ಚಿಸುವ ಧಾವಂತದಲ್ಲಿ ಅದರ ಇನ್ನೊಂದು ಮುಖವನ್ನು ಚರ್ಚೆಗೊಡ್ಡುವಲ್ಲೂ ಬಿಜೆಪಿ ವಿರೋಧಿಗಳು ಎಡವಿರುವುದೂ ನಡೆದಿದೆ. ಉತ್ತರ ಪ್ರದೇ ಶದ ಐವರಲ್ಲಿ 4 ಮಂದಿ (80%) ಉಚಿತ ರೇಶನ್ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಅಲ್ಲದೇ, ಪ್ರತಿ ಐದು ಮಂದಿಯ ಪೈಕಿ ಮೂರು ಮಂದಿ ಸಬ್ಸಿಡಿ ಸಹಿತ ರೇಶನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇಂಥ ಇನ್ನೆರಡು ಯೋಜನೆಗಳೂ ಉತ್ತರ ಪ್ರದೇ ಶದ ಜನರ ಮೇಲೆ ತೀವ್ರ ಪರಿಣಾಮವನ್ನು ಬೀರಿವೆ. ಅದರಲ್ಲಿ ಒಂದು- ಉಜ್ವಲ ಯೋಜನೆ. 46% ಮಹಿಳೆಯರು ಈ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಹೀಗೆ ಲಾಭ ಪಡೆದುಕೊಂಡ 4 ಮಂದಿಯ ಪೈಕಿ ಮೂರು ಮಂದಿ ತಮ್ಮ ಗ್ಯಾಸ್ ಸಿಲಿಂಡರನ್ನು ಉಚಿತವಾಗಿ ರಿಫಿಲ್ ಮಾಡಿ ಕೊಡ ಲಾಗಿದೆ ಎಂದೂ ಹೇಳಿದ್ದಾರೆ. ಇನ್ನೊಂದು- ಕಿಸಾನ್ ಸಮ್ಮಾನ್ ನಿಧಿ. ಇದು ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವ ಯೋಜನೆಯಾಗಿದ್ದು, ಸುಮಾರು 57% ಮನೆಗಳು ಇದರ ಲಾಭ ಪಡೆದಿವೆ. ಹಾಗೆಯೇ 27% ಮಂದಿ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆದುಕೊಂಡಿದ್ದು, ಅವರ ಖಾತೆಗಳಿಗೆ ನೇರ ಹಣ ವರ್ಗಾವಣೆಯಾಗಿದೆ. ಅದೇವೇಳೆ,

ಉಚಿತ ಮನೆ ನಿರ್ಮಾಣದ ಫಲಾನುಭವಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಒಂದುರೀತಿಯಲ್ಲಿ, ಕಿಸಾನ್ ಸಮ್ಮಾನ್ ನಿಧಿ ಮತ್ತು ನೇರ ಹಣ ವರ್ಗಾವಣೆ ಯೋಜನೆಗಳು ಬಿಜೆಪಿಗೆ ಮತ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ ಎಂಬುದಾಗಿ ಸಿಡಿಎಸ್ ಸಮೀಕ್ಷೆ ಎತ್ತಿ ಹೇಳಿದೆ. ಉಚಿತ ರೇಶನ್ ಮತ್ತು ನೇರ ಹಣ ವರ್ಗಾವಣೆಯ ಫಲಾನುಭವಿಗಳಾದ ಬಡವರು ಭಾರೀ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಈ ಯೋಜನೆಯ ಫಲಾನುಭವಿ ದಲಿತರು ಭಾರೀ ಸಂಖ್ಯೆಯಲ್ಲಿ ಬಿಜೆಪಿಯ ಕೈ ಹಿಡಿದಿದ್ದಾರೆ ಮತ್ತು ಬಿಎಸ್‌ಪಿಯನ್ನು ಕೈಬಿಟ್ಟಿದ್ದಾರೆ. ವಿಶೇಷವೆಂದರೆ, ಬಿಜೆಪಿಯ ಕಲ್ಯಾಣ ಯೋಜನೆಗಳು ನೇರವಾಗಿ ಅಡುಗೆ ಮನೆಗೆ ಸಂಬಂಧಿಸಿ ದವುಗಳಾಗಿರುವುದರಿಂದ ಮಹಿಳಾ ಮತಗಳು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಹರಿದಿವೆ. ನೇರ ನಗದು ವರ್ಗಾವಣೆ, ಉಜ್ವಲ್ ಯೋಜನಾ, ಇನ್ಶೂರೆನ್ಸ್, ಉಚಿತ ರೇಶನ್ ಇತ್ಯಾದಿಗಳೆಲ್ಲದರ ನೇರ ಫಲಾನುಭವಿಗಳು ಮಹಿಳೆಯರಾಗಿದ್ದು, ಇದು ಬಿಜೆಪಿಯ ಗೆಲುವಿನಲ್ಲಿ ಪಾತ್ರ ವಹಿಸಿವೆ. ಮಹಿಳಾ ಮತಗಳನ್ನು ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಹೋಲಿಕೆ ಮಾಡುವುದಾದರೆ ಸಮಾಜವಾದಿ ಪಕ್ಷಕ್ಕಿಂತ ಬಿಜೆಪಿಗೆ 13%ಕ್ಕಿಂತ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದಾರೆ. ಅದರಲ್ಲೂ ಮಹಿಳೆಯರ ಪೈಕಿ 18ರಿಂದ 25 ವರ್ಷ ಮತ್ತು 56ರ ವರ್ಷ ಮೇಲಿನ ಮಹಿಳೆಯರು ಬಿಜೆಪಿಗೆ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. 18ರಿಂದ 25 ವರ್ಷದ ಪುರುಷ ಮತದಾರರ ಮಟ್ಟಿಗೆ ಹೀಗೆ ಹೇಳು ವಂತಿಲ್ಲ. ಈ ಪ್ರಾಯದ ಮತದಾರರು ಸಮಾಜವಾದಿ ಪಕ್ಷಕ್ಕೆ ದೊಡ್ಡಮಟ್ಟದಲ್ಲಿ ಮತ ಚಲಾಯಿಸಿದ್ದಾರೆ. ಅಂದಹಾಗೆ, ಪುರುಷರಿ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಬಾರಿ ಉತ್ತರ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಮತ ಚಲಾವಣೆಯ ಅನುಪಾತ ಉನ್ನತ ಮಟ್ಟದಲ್ಲಿದೆ. ಇದು ಬಿಜೆಪಿಯ ಪಾಲಿಗೆ ಭಾರೀ ಲಾಭವನ್ನು ತಂದುಕೊಟ್ಟಿದೆ. ಮುಖ್ಯವಾಗಿ,

ರೈತ ಪ್ರತಿಭಟನೆ ಇಷ್ಟು ತಾರಕ ಸ್ಥಿತಿಗೆ ಏರಿಯೂ ಮತ್ತು ಲಖೀಂಪುರ್‌ನಂಥ ಕ್ರೂರ ಘಟನೆ ನಡೆದೂ ಬಿಜೆಪಿಗೆ ಹೇಗೆ ಅವೆಲ್ಲವನ್ನೂ ಮೀರಿ ನಿಲ್ಲಲು ಸಾಧ್ಯವಾಯಿತು ಎಂಬ ಪ್ರಶ್ನೆ ಬಹುತೇಕ ಎಲ್ಲರಲ್ಲೂ ಇದೆ. ಹಾಗೆಯೇ, ಬೀಡಾಡಿ ಗೋವುಗಳ ಸಂಸ್ಯೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆದರೆ ರೈತ ಮಸೂದೆಯನ್ನು ಹಿಂಪಡೆದುದರ ಜೊತೆಗೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ರೈತರ ಸಿಟ್ಟನ್ನು ತಣಿಸುವಲ್ಲಿ ಯಶಸ್ವಿಯಾಯಿತು ಎಂದು ಸಮೀಕ್ಷೆಯಿಂದ ಗೊತ್ತಾಗಿದೆ. ಎಲ್ಲೆಲ್ಲ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ಪ್ರದೇಶಗಳಿವೆಯೋ ಅಲದಲೆಲ್ಲ ಬಿಜೆಪಿ ಭಾರೀ ದೊಡ್ಡ ಮಟ್ಟದಲ್ಲಿ ಜಯ ಗಳಿಸಿರುವುದೂ ಇದನ್ನು ಸಮರ್ಥಿಸುತ್ತದೆ. ಮುಖ್ಯವಾಗಿ ಲಖೀಂಪುರ ಖೇರಿಯ ಒಟ್ಟು ಸ್ಥಾನಗಳ ಪೈಕಿ ಎಲ್ಲ ಸೀಟನ್ನೂ ಬಿಜೆಪಿಯೇ ಗೆದ್ದು ಕೊಂಡಿದೆ. ಅಲ್ಲದೇ, ಮತದಾನಕ್ಕಿಂತ ಕೇವಲ ಎರಡು ವಾರಗಳ ಮೊದಲಷ್ಟೇ ಆರೋಪಿ ಮಿಶ್ರಾನ ಬಿಡುಗಡೆಯಾಗಿತ್ತು. ಕೇಂದ್ರ ಸಚಿವನ ಪುತ್ರನಾಗಿರುವ ಈತನ ಬಿಡುಗಡೆಯು ಲಖೀಂಪುರ್ ದುರ್ಘಟನೆಯನ್ನು ಜನರಿಗೆ ಮತ್ತೊಮ್ಮೆ ನೆನಪಿಸುವಂತೆ ಮಾಡೀತು ಮತ್ತು ಇದು ಮತದಾನದ ವೇಳೆ ಬಿಜೆಪಿ ವಿರೋಧಿ ಅಲೆಗೆ ಕಾರಣವಾದೀತು ಎಂದು ಹೇಳಲಾಗಿತ್ತು. ಆದರೆ, ಹೀಗೆ ಆಗದಿರಲು ಮಹಿಳಾ ಕೇಂದ್ರಿತ ಯೋಜ ನೆಗಳು, ಉಚಿತ ರೇಷನ್, ಕಿಸಾನ್ ಸಮ್ಮಾನ್ ಯೋಜನೆ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ,
ಬಿಜೆಪಿಯ ಗೆಲುವಿಗೆ ಅದು ಕೊನೆಕ್ಷಣದಲ್ಲಿ ತಂದ ಕಲ್ಯಾಣ ಕಾರಿ ಯೋಜನೆಗಳು, ರೈತ ಮಸೂದೆ ಹಿಂತೆಗೆತ ಇತ್ಯಾದಿಗಳೇ ಪೂರ್ಣ ಕಾರಣ ಎಂದೂ ಯಾರೂ ಒಪ್ಪುವುದಿಲ್ಲ. ಜನಕಲ್ಯಾಣ ಯೋಜನೆಗಳೇ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕೈ ಹಿಡಿ ದಿದೆ ಎಂದಾದರೆ, ಇಂಥದ್ದೊಂದು ಫಲಿತಾಂಶ ಕರ್ನಾಟಕದಲ್ಲೂ ಲಭಿಸಬೇಕಿತ್ತು. ಉಚಿತ ರೇಶನ್, ಇಂದಿರಾ ಕ್ಯಾಂಟೀನ್‌ನಂಥ ಬಹು ಜನಪ್ರಿಯ ಮತ್ತು ಬಡವ ಪರ ಯೋಜನೆಗಳನ್ನು ಜಾರಿ ಮಾಡಿದ ಹೊರತೂ ಸಿದ್ದರಾಮಯ್ಯರನ್ನು ರಾಜ್ಯದ ಮಂದಿ ಕೈ ಹಿಡಿಯಲಿಲ್ಲವೇಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಸ್ಪಷ್ಟವಾಗುವುದೇ ಇಲ್ಲಿ. ಕೋಮು ಧ್ರುವೀಕರಣದ ಹೊರತು ಬರೇ ಜನಕಲ್ಯಾಣ ಯೋಜನೆಗಳಿಂದ ಗೆಲ್ಲುವ ಸಾಮರ್ಥ್ಯ ಬಿಜೆಪಿಗೆ ಇಲ್ಲವೇ ಇಲ್ಲ. ಮುಸ್ಲಿಮ್ ದ್ವೇಷಿ ಮತ್ತು ಧಾರ್ಮಿಕ ವಿಕಾರವನ್ನು ಕೆರಳಿಸುವುದು ಅದರ ರಾಜಕೀಯ ನೀತಿ. ಹಿಂದೂ ಧರ್ಮವನ್ನು ಪ್ರೀತಿಸುವ ಹೆಸರಲ್ಲಿ ಅದು ಮಾಡುತ್ತಾ ಬಂದಿರುವುದು ಮುಸ್ಲಿಮ್ ದ್ವೇಷವನ್ನು. ಮುಸ್ಲಿಮರನ್ನು ದ್ವೇಷಿಸುವುದೇ ಹಿಂದೂ ಧರ್ಮ ಪ್ರೇಮದ ಮಾಪನವೆಂಬAತೆ ಅದು ಬಿಂಬಿಸುತ್ತಾ ಬಂದಿದೆ. ಉತ್ತರ ಪ್ರದೇಶದ ಉದ್ದಕ್ಕೂ ಯೋಗಿ ಇಂಥ ಹಲವು ಪದಗಳನ್ನು ಬಳಸಿದರು. ಬುಲ್ಡೋಜರ್ ಎಂಬ ಪದ ಪರೋಕ್ಷವಾಗಿ ಮುಸ್ಲಿಮ ರಿಗೆ ಸಂಬಂಧಿಸಿದ್ದೇ ಆಗಿತ್ತು. ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡ ಮುಸ್ಲಿಮ್ ರಾಜಕಾರಣಿಗಳನ್ನು ಹಣಿಯುವುದಕ್ಕೆಂದು ಠಂಕಿಸಲಾದ ಈ ಪದ, ಅನಾಮತ್ತಾಗಿ ಇಡೀ ಮುಸ್ಲಿಮರನ್ನು ಗುರಿಯಾಗಿಟ್ಟು ಕೊಂಡೇ ಹೇಳಲಾಗುತ್ತಿತ್ತು. ಗೋವಾದಲ್ಲಿ ಈ ಬಗೆಯ ಧ್ರುವೀಕರಣ ರಾಜಕಾರಣ ನಡೆದಿಲ್ಲ ಮತ್ತು ಅಲ್ಲಿಯ ಫಲಿತಾಂಶವೂ ಇದನ್ನು ಸ್ಪಷ್ಟಪಡಿಸುತ್ತದೆ.

ಬಿಜೆಪಿಗೆ ಈ ದೇಶದಲ್ಲಿ ಮತ ಹೇಗೆ ಬಾಚಬೇಕೆಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಕಲ್ಯಾಣ ಯೋಜನೆಗಳೊಂದೇ ತನ್ನ ಕೈ ಹಿಡಿಯದೆಂಬುದನ್ನೂ ಅದು ಅರಿತುಕೊಂಡಿದೆ. ಕಾಂಗ್ರೆಸ್ ಮೇಲೆ ಭರವಸೆ ಇಟ್ಟ ಮತ್ತು ನೆಹರೂ, ಇಂದಿರಾ ಎಂದೆಲ್ಲ ಅಭಿಮಾನ ಪಡುತ್ತಿದ್ದ ಜನರೆಲ್ಲ ಹಿರಿಯರ ಪಟ್ಟಿಗೆ ಸೇರಿದ್ದಾರೆ. ಅವರ ಮಕ್ಕಳಾದರೋ ಕಾಂಗ್ರೆ ಸನ್ನು ಕೈಬಿಟ್ಟು ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. ಬಿಜೆಪಿ ಒಂದು ಪಕ್ಷವಾಗಿ ಗುರುತಿಸಿಕೊಂಡಿದ್ದರೂ ಅದು ವಿಭಿನ್ನ ಮನಸ್ಥಿತಿಯವರಿಗೆ ವಿಭಿನ್ನ ಸಂಘಟನೆಗಳನ್ನು ರಚಿಸಿಟ್ಟಿರುವ ಒಂದು ಆಲದ ಮರ. ಯುವ ಸಮೂಹದ ಮನಸ್ಥಿತಿಗೆ ಹೊಂದು ವಂತೆ ಅದು ಬೇರೆ ಬೇರೆ ರೀತಿಯ ಸಂಘಟನೆಗಳನ್ನು ತಯಾರು ಮಾಡಿದೆ. ಮುಸ್ಲಿಮರ ವಿರುದ್ಧ ತೀರಾ ಆಕ್ರೋಶಗೊಳ್ಳುವವರಿಗೆ ಒಂದು ಸಂಘಟನೆ, ಮೃದು ವಾಗಿರುವವರಿಗೆ ಒಂದು, ಜಾತ್ಯತೀತತೆಯನ್ನು ಒಪ್ಪುವವರಿಗೆ ಒಂದು, ಸುಧಾರಣಾ ವಾದಿಗಳಿಗೆ ಒಂದು, ಕರ್ಮಠರಿಗೆ ಒಂದು, ಅಡ್ಡಾದಿಡ್ಡಿಯಾಗಿ ವರ್ತಿಸುವವರಿಗೆ ಒಂದು- ಹೀಗೆ ಬೇರೆ ಸಂಘಟನೆಗಳನ್ನು ಅದು ರಚಿಸಿಟ್ಟಿದ್ದು, ಅವುಗಳಲ್ಲಿ ಸೇರುವ ವರೆಲ್ಲರೂ ಬಿಜೆಪಿ ಬೆಂಬಲಿಗರಾಗುವಂತೆ ನೋಡಿಕೊಳ್ಳಲಾಗುತ್ತದೆ. ಎ ಲ್ಲಿಯವರೆಗೆಂದರೆ, ತಮ್ಮದೇ ಕಿಸೆಯಿಂದ ಹಣ ಖರ್ಚು ಮಾಡಿ ಬಿಜೆಪಿಗಾಗಿ ಅವರು ದುಡಿಯಲೂ ಸಿದ್ಧರಾಗಿರುತ್ತಾರೆ. ಅದರ ಫಲಿತಾಂಶವೇ ಈಗಿನ ಸಾಧನೆ. ಇಷ್ಟೇ.