ಲಾಹೋರ್,ಮೇ 9: ಧರ್ಮ ನಿಂದೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿ ನಂತರ ಬಿಡುಗಡೆಗೊಂಡ ಆಸಿಯಾ ಬೀಬಿ ಪಾಕಿಸ್ತಾನದಿಂದ ಕೆನಡಾ ತಲುಪಿದರು. ಆಸಿಯಾ ಬೀಬಿಯ ಶಿಕ್ಷೆ ಕಳೆದ ವರ್ಷ ಸುಪ್ರೀಂಕೋರ್ಟು ಸಡಿಲಿಕೆ ಮಾಡಿತ್ತು. ನಂತರ ಅವರನ್ನು ಬಿಡುಗಡೆಗೊಳಿಸಲಾಗಿದ್ದರೂ ತಿಂಗಳ ಕಾಲ ಅಜ್ಞಾತ ವಾಸದಲ್ಲಿರಿಸಲಾಗಿತ್ತು. ಆಸಿಯಾರ ವಕೀಲ ಸೈಫುಲ್ ಮಲೂಕ್ ಅವರು ಸುರಕ್ಷಿತವಾಗಿ ಕೆನಡಾ ತಲುಪಿದ್ದಾರೆ ಎಂದು ತಿಳಿಸಿದರು. ಆಸಿಯಾರ ಇಬ್ಬರು ಮಕ್ಕಳಿಗೂ ಕೆನಡಾದಲ್ಲಿ ರಾಜಕೀಯ ಆಶ್ರಯ ನೀಡಲಾಗಿದೆ. ಆಸಿಯಾರಿಗೂ ಕೆನಡಾ ಆಶ್ರಯ ಭರವಸೆ ನೀಡಿದೆ. 2009ರಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿತ್ತು. ನರೆಯ ಮಹಿಳೆಯರೊಂದಿಗಿನ ಜಗಳವು ವಿವಾದಕ್ಕೆ ತಿರುಗಿ ಪ್ರವಾದಿ ಮುಹಮ್ಮದ್(ಸ)ರ ನಿಂದೆಯಾಗಿ ಬದಲಾಗಿತ್ತು ಎಂದು ನೆರೆಯವರು ಆಸಿಯಾ ವಿರುದ್ಧ ದೂರು ನೀಡಿದ್ದರು. ವಿಚಾರಣಾ ಕೋರ್ಟು ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಸಾಕ್ಷ್ಯಗಳ ಕೊರತೆ ಪರಿಗಣಿಸಿ ಕಳೆದ ವರ್ಷ ಸುಪ್ರೀಂಕೋರ್ಟು ಅವರನ್ನು ಆರೋಪ ಮುಕ್ತಗೊಳಿಸಿದೆ.












