ಸಿವಿಲ್ ಎಂಜಿನಿಯರಿಂಗ್ ಪರೀಕ್ಷೆ: 13 ಚಿನ್ನದ ಪದಕದೊಂದಿಗೆ 1 ನೇ ರ‌್ಯಾಂಕ್ ಗಳಿಸಿದ ಸಹ್ಯಾದ್ರಿ ಕಾಲೇಜಿನ ಅಸ್ಮತ್ ಶರ್ಮೀನ್

0
5765

ಸನ್ಮಾರ್ಗ ವಾರ್ತೆ

ಮಂಗಳೂರು : ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ(ವಿಟಿಯು) ನಡೆಸಿದ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಅಸ್ಮತ್ ಶರ್ಮೀನ್ ಟಿ.ಎಸ್. 2019-20ನೇ ಶೈಕ್ಷಣಿಕ ವರ್ಷಕ್ಕೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ 1 ನೇ ರ‌್ಯಾಂಕ್ ಪಡೆದಿದ್ದಾರೆ.

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅಸ್ಮತ್ ಶರ್ಮೀನ್ ಟಿ ಎಸ್ 9.42 ರ ಸಿಜಿಪಿಎ ಗಳಿಸುವ ಮೂಲಕ ಶ್ರೇಯಾಂಕವನ್ನು ಪಡೆದಿದ್ದಲ್ಲದೇ, 13 ಚಿನ್ನದ ಪದಕಗಳನ್ನು ಸಹ ಗಳಿಸಿದ್ದಾರೆ. ಜೊತೆಗೆ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2021 ರ ಏಪ್ರಿಲ್ 3 ರಂದು ಬೆಳಗಾವಿಯ ವಿಟಿಯುನಲ್ಲಿ ನಡೆಯಲಿರುವ 20ನೇ ವಾರ್ಷಿಕ ಸಮಾವೇಶದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ಅವರಿಂದ ಪದವಿ ಮತ್ತು ಪದಕಗಳನ್ನು ಸ್ವೀಕರಿಸಲಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ (ವಿಟಿಯು) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಅಸ್ಮತ್ ಶರ್ಮೀನ್ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಪಠ್ಯದಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತನ್ನ ಮೊದಲ ಸೆಮಿಸ್ಟರ್‌ನಿಂದಲೇ ಅತ್ಯುತ್ತಮವಾಗಿ ಭಾಗವಹಿಸುತ್ತಿದ್ದಳು ಮತ್ತು ಆಕೆ ಉತ್ತಮ ಅಂಕ ಗಳಿಸುವ ನಿರೀಕ್ಷೇ ನಮಗೆ ಇತ್ತು ಎಂದು ಆಕೆಯ ಅಧ್ಯಾಪಕರು ತಿಳಿಸಿದ್ದಾರೆ. ಸದ್ಯ ಈಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಸ್ಮತ್ ಶರ್ಮೀನ್ ಟಿ.ಎಸ್. ಕಾಸರಗೋಡಿನ ಶರೀಫ್ ಮತ್ತು ಶಹೀದಾ ದಂಪತಿಯ ಪುತ್ರಿಯಾಗಿದ್ದಾಳೆ.