ಸನ್ಮಾರ್ಗ ವಾರ್ತೆ
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ(ಅಕ್ಟೋಬರ್ 07) ತಡರಾತ್ರಿ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದೇ ಸಂದರ್ಭದಲ್ಲಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಡಿಸಿಎಮ್ ಘೋಷಿಸಿದ್ದಾರೆ.
ಬೆಂಗಳೂರು, ದಕ್ಷಿಣ ಹೊರವಲಯದಲ್ಲಿರುವ ಅತ್ತಿಬೆಲೆ ಗಡಿ ಚೆಕ್‌ಪೋಸ್ಟ್‌ನಿಂದ 500 ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಸಗಟು ಪಟಾಕಿ ಗೋದಾಮು ಶ್ರೀ ಬಾಲಾಜಿ ಟ್ರೇಡರ್ಸ್‌ನಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಗೋದಾಮಿನಲ್ಲಿ ಒಟ್ಟು 19 ಕಾರ್ಮಿಕರಿದ್ದರು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ದುರಂತಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ, ಆತ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಗೊಂಡಿರುವ ಇತರ ಆರು ಮಂದಿ ಆಸ್ಪತ್ರೆಯಲ್ಲಿದ್ದಾರೆ. 12 ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ದೀಪಾವಳಿ ಪ್ರಯುಕ್ತ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು ಮತ್ತು ಗೋದಾಮುಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ಕಾರ್ಮಿಕರು ಶ್ರೀ ಬಾಲಾಜಿ ಟ್ರೇಡರ್ಸ್‌ಗೆ ಲಾರಿ ಮತ್ತು ಎರಡು ಮಿನಿ ಗೂಡ್ಸ್ ವಾಹನಗಳಿಂದ ಪಟಾಕಿಗಳನ್ನು ಇಳಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ದೀಪಾವಳಿಗೆ ಮುನ್ನ ತಮಿಳುನಾಡಿನ ಪಟಾಕಿ ಕೇಂದ್ರವಾದ ಶಿವಕಾಶಿಯಿಂದ ಪಟಾಕಿಗಳನ್ನು ಸಾಗಿಸಲಾಗಿತ್ತು.
ಬೆಂಕಿಯ ನಿಖರವಾದ ಕಾರಣ ಅಸ್ಪಷ್ಟವಾಗಿದ್ದರೂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮೂರು ವಾಹನಗಳಲ್ಲಿ ಸಂಗ್ರಹಿಸಲಾದ ಪಟಾಕಿಗಳು ಹೈ-ಟೆನ್ಷನ್ ಓವರ್‌ಹೆಡ್ ವಿದ್ಯುತ್ ತಂತಿಗೆ ತಾಕಿದ ಪರಿಣಾಮ ದುರಂತ ಸಂಭವಿಸಿದೆ ಎಂದು ಶಂಕಿಸಿದ್ದಾರೆ.












