ಸನ್ಮಾರ್ಗ ವಾರ್ತೆ
ನವದೆಹಲಿ, ಅಕ್ಟೋಬರ್ 8: 2000 ರೂ ಮುಖ ಬೆಲೆಯ ನೋಟುಗಳನ್ನು ವಿನಿಯಮ ಮಾಡಲು ಅಕ್ಟೋಬರ್ 7ರ ವರೆಗೂ ಇದ್ದ ಡೆಡ್ಲೈನ್ ಮುಕ್ತಾಯಗೊಂಡಿದೆ.
ಆದರೆ, ಆರ್ಬಿಐನ ಕೆಲ ಕಚೇರಿಗಳಲ್ಲಿ (RBI Issue Offices) ನೋಟು ವಿನಿಮಯಕ್ಕೆ ಇನ್ನೂ ಕೂಡ ಅವಕಾಶ ಕಲ್ಪಿಸಿದೆ. ಈ ಅವಕಾಶ ಎಷ್ಟು ದಿನಗಳವರೆಗೆ ಇರಲಿದೆಯೆಂಬುದು ನಿಗದಿಯಾಗಿಲ್ಲ. ಆರ್ಬಿಐನಿಂದ ಮುಂದಿನ ನಿರ್ದೇಶನ ಬರುವವರೆಗೂ ಈ ಅವಕಾಶ ಇರುತ್ತದೆ.
ಆರ್ಬಿಐ ನೀಡಿದ ಮಾಹಿತಿ ಪ್ರಕಾರ ಆರ್ಬಿಐನ 19 ಇಷ್ಯೂ ಆಫೀಸ್ಗಳಲ್ಲಿ 2,000 ರೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಇದರಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಕಚೇರಿಯೂ ಒಂದಾಗಿದೆ.
2023ರ ಮೇ 19ರಂದು ಆರ್ಬಿಐ 2,000 ರೂ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಳ್ಳುತ್ತಿರುವುದಾಗಿ ಹೇಳಿತು. ಈ ನೋಟಿನ ಬಾಳಿಕೆ ಅವಧಿ ಮುಗಿದಿದ್ದರಿಂದ ಬ್ಯಾಂಕಿಂಗ್ ಪ್ರಕ್ರಿಯೆಯ ಭಾಗವಾಗಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಆರ್ಬಿಐ ತಿಳಿಸಿತು.
ನೋಟುಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಲು ಅಥವಾ ಬೇರೆ ನೋಟುಗಳೊಂದಿಗೆ ವಿನಿಮಯ ಮಾಡಲು ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿತ್ತು. ಬಳಿಕ ಡೆಡ್ಲೈನ್ ಅನ್ನು ಅಕ್ಟೋಬರ್ 7ರವರೆಗೂ ವಿಸ್ತರಿಲಾಯಿತು. ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ನೋಟು ವಿನಿಮಯ ಮಾಡುವ ಅವಕಾಶ ಇತ್ತು. ಈಗ ಅಕ್ಟೋಬರ್ 7ರ ವಿಸ್ತರಿತ ಡೆಡ್ಲೈನ್ ಕೂಡ ಮುಗಿದು ಹೋಗಿದೆ. ಆದರೂ 2,000 ರೂ ನೋಟು ಅಮಾನ್ಯವಾಗಿಲ್ಲ. ಈಗಲೂ ಕೂಡ ಈ ನೋಟುಗಳನ್ನು ವಿನಿಮಯ ಮಾಡಬಹುದು. ಆದರೆ, ನಿರ್ದಿಷ್ಟ ಆರ್ಬಿಐ ಕಚೇರಿಗಳಲ್ಲಿ ಮಾತ್ರವೇ ಇದಕ್ಕೆ ಅವಕಾಶವಿದೆ.
2,000 ರೂ ನೋಟು ವಿನಿಮಯಕ್ಕೆ ನಿಗದಿಪಡಿಸಿದ 19 ಆರ್ಬಿಐ ಇಷ್ಯೂ ಕಚೇರಿಗಳಿರುವ ನಗರಗಳು
- ಅಹ್ಮದಾಬಾದ್
- ಬೆಂಗಳೂರು
- ಭುವನೇಶ್ವರ್
- ಮುಂಬೈ
- ನವಿ ಮುಂಬೈ
- ಭೋಪಾಲ್
- ಲಕ್ನೋ
- ಚಂಡೀಗಡ
- ಚೆನ್ನೈ
- ಗುವಾಹಟಿ
- ಹೈದರಾಬಾದ್
- ಜಮ್ಮು
- ಜೈಪುರ್
- ಕಾನಪುರ್
- ಕೋಲ್ಕತಾ
- ನಾಗಪುರ್
- ನವದೆಹಲಿ
- ಪಾಟ್ನಾ
- ತಿರುವನಂತಪುರಂ












