ಬಾಬರಿ ಪ್ರಕರಣದಲ್ಲಿ ಸಮನ್ವಯ ಸಾಧ್ಯವಿಲ್ಲ: ಮಧ್ಯಸ್ಥಿಕೆ ಸಮಿತಿ ಮೋಸದಾಟ ನಡೆಸುತ್ತಿದೆ ಎಂದ ಮುಸ್ಲಿಂ ಸಂಘಟನೆಗಳು

0
1066

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ,ಅ.18: ಬಾಬರಿ ಜಮೀನು ಪ್ರಕರಣದಲ್ಲಿ ಮಧ್ಯಸ್ಥಿಕೆ ಸಮಿತಿ ಸದಸ್ಯರು ಮೋಸದಾಟ ನಡೆಸುತ್ತಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ. ಮಧ್ಯಸ್ಥಿಕೆ ಸಮಿತಿ ನಡೆಯ ಹಿಂದೆ ಸಂಚಿದೆ ಎಂದು ಪ್ರಕರಣದ ಕಕ್ಷಿಗಳಾದ ಮುಸ್ಲಿಂ ಸಂಘಟನೆಗಳ ವಕೀಲರು ಆರೋಪಿಸಿದರು.

ಮಾಧ್ಯಮಗಳಲ್ಲಿ ಬಹಿರಂಗವಾದ ಮಧ್ಯಸ್ಥಿಕೆ ಸಮಿತಿ ವರದಿ ನಿಷ್ಪಕ್ಷವಾಗಿಲ್ಲ. ಸಮತಿಯ ವಿಶ್ವಾಸವನ್ನು ಪ್ರಶ್ನಾರ್ಹಗೊಳಿಸಿದೆ ಎಂದು ಸಂಘಟನೆಗಳು ಹೇಳಿವೆ. ಸುಪ್ರೀಂಕೋರ್ಟು ನೀಡುವ ಅಂತಿಮ ತೀರ್ಪನ್ನು ಅಂಗೀಕರಿಸುತ್ತೇವೆ ಎಂದು ಸಂಘಟನೆಗಳಿಗಾಗಿ ಹಾಜರಾದ ಇಜಾಸ್ ಮಕ್ಬೂಲ್ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಮಿತಿಯ ಸದಸ್ಯ ಹಿರಿಯ ವಕೀಲ ಶ್ರೀರಾಮ್ ಪಿಂಚುರವರು ಸುನ್ನಿ ವಕ್ಫ್ ಬೋರ್ಡಿನ ಅಧ್ಯಕ್ಷ ಝಫರ್ ಫಾರೂಕಿ ತಾಳದಂತೆ ಕುಣಿಯುತ್ತಿದ್ದಾರೆ. ಸುನ್ನಿ ವಕ್ಫ್ ಬೋರ್ಡು ಮುಸ್ಲಿಂ ಸಂಘಟನೆಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿಕೆಯಲ್ಲಿ ಅವರು ಹೇಳಿದರು.

ಇದೇ ವೇಳೆ, ಮಧ್ಯಸ್ಥಿಕೆ ಸಮಿತಿಯ ಶಿಫಾರಸ್ಸುಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ತನಿಖೆಯಾಗಬೇಕೆಂದು ಸಂಘಟನೆಗಳು ಹೇಳಿವೆ. ಈ ವಿಷಯವನ್ನು ಉಲ್ಲೇಖಿಸಿ ಚೀಫ್ ಜಸ್ಟಿಸ್ ರಂಜನ್ ಗೊಗೊಯಿಗೆ ಸಂಘಟನೆಗಳು ಪತ್ರ ನೀಡಿವೆ.