ಸನ್ಮಾರ್ಗ ವಾರ್ತೆ
ಬಂಟ್ವಾಳ ಏಪ್ರಿಲ್ 21- ಇಲ್ಲಿನ ಮಹಿಳೆಯೊಬ್ಬರು ಕೊರೋನಾದಿಂದ ಸಾವಿಗೀಡಾಗಿರುವುದು ಮತ್ತು ಅವರಿಗೆ ಯಾವ ಮೂಲದಿಂದ ಕೊರೋನಾ ಸೋಂಕು ತಗುಲಿದೆ ಎಂಬುದು ಈವರೆಗೂ ಪತ್ತೆಯಾಗದಿರುವುದು ಜಿಲ್ಲಾಡಳಿತವನ್ನು ಆತಂಕಕ್ಕೆ ತಳ್ಳಿದೆ.
ಮೃತ ಮಹಿಳೆ ವಿದೇಶಕ್ಕೆ ಹೋಗಿಲ್ಲ, ವಿದೇಶದಿಂದ ಫೆಬ್ರವರಿ ತಿಂಗಳಲ್ಲಿ ಆಗಮಿಸಿದ್ದ ಮಗ ಕ್ವಾರಂಟೈನ್ ಗೂ ಒಳಗಾಗಿಲ್ಲ. ಅಲ್ಲದೆ, ಆ ಸಂದರ್ಭದಲ್ಲಿ ದುಬೈಯಲ್ಲಿ ಕೊರೋನಾ ಇರಲಿಲ್ಲ. ಹೀಗಿರುವಾಗ ಈ ಮಹಿಳೆ ಕೊರೋನಾ ಸಂಪರ್ಕಕ್ಕೆ ಹೇಗೆ ಬಂದರು ಅನ್ನುವ ಬಗ್ಗೆ ಜಿಲ್ಲಾಡಳಿತ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಇನ್ನೂ ಖಚಿತ ಸುಳಿವು ಲಭ್ಯವಾಗಿಲ್ಲ.
ಮಹಿಳೆಯ ಮಗ ಫೆಬ್ರವರಿ 16ರಂದು ಬೆಂಗಳೂರಿಗೆ ಬಂದು ಅಲ್ಲಿಂದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು ಮತ್ತು ಕ್ವಾರಂಟೈನ್ ನಲ್ಲಿ ಇರಬೇಕಾದವರ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಇದು ಲೋಪವೊ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡದಿರುವುದರ ಸಮಸ್ಯೆಯೋ ಅನ್ನುವುದು ಕೂಡ ಖಚಿತವಾಗಿಲ್ಲ.
ಮೃತ ಮಹಿಳೆಯಲ್ಲಿ ವಾರದ ಹಿಂದೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು. ಆರು ದಿನಗಳ ಕಾಲ ಈ ಚಿಕಿತ್ಸೆ ಮುಂದುವರೆದಿದ್ದು ಆರೋಗ್ಯ ಬಿಗಡಾಯಿಸಿದ ಕಾರಣ ಶನಿವಾರ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದರು. ಇದೇ ವೇಳೆ ಈ ಮೊದಲು ಆರು ದಿನಗಳ ಕಾಲ ಈ ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಕೂಡ ಯಾವ ವಿವರವನ್ನೂ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಂಡಿಲ್ಲ ಅನ್ನುವ ದೂರು ಇದೆ. ಇದು ವೈದ್ಯರ ಲೋಪವಾಗಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಮಹಿಳೆಯ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಕಲೆಹಾಕುವ ಹೊಣೆಗಾರಿಕೆಯೂ ಜಿಲ್ಲಾಡಳಿತದ ಮೇಲಿದ್ದು, ಹಲವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಅವರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಒಟ್ಟಿನಲ್ಲಿ ದುಬೈಯಿಂದ ಫೆಬ್ರವರಿಯಲ್ಲಿ ಭಾರತಕ್ಕೆ ಬರುವಾಗ ದುಬೈಯಲ್ಲಿ ಕೊರೋನಾ ಸುದ್ದಿ ಮಾಡಿರಲಿಲ್ಲ. ಭಾರತದಲ್ಲೂ ಸುದ್ದಿಯಲ್ಲಿರಲಿಲ್ಲ. ಅಲ್ಲದೆ, ಈ ಮಹಿಳೆ ಕೊರೋನಾ ಪೀಡಿತ ರಾಷ್ಟ್ರಗಳಿಗೆ ಭೇಟಿಯನ್ನೂ ನೀಡಿರಲಿಲ್ಲ. ಹೀಗಿರುವಾಗ ಈ ಮಹಿಳೆಗೆ ಕೊರೋನಾ ಸೋಂಕು ಹೇಗೆ ತಗುಲಿತು ಅನ್ನುವ ಜಿಜ್ಞಾಸೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಲ್ಲಿ ಹುಟ್ಟಿಕೊಂಡಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












