ಎಲ್ಲರಲ್ಲೂ ಸಹಿಷ್ಣುತೆ ಗುಣ ಹಾಗೂ ಎಲ್ಲಾ ಧರ್ಮಗಳನ್ನು ಗೌರವಿಸುವ ಮನೋಭಾವನೆ ಬೆಳೆಯಲಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಕ್ರೀದ್ ಸಂದೇಶ

0
270

ಸನ್ಮಾರ್ಗ ವಾರ್ತೆ

ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸೇರಿ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್​ ಅಹ್ಮದ್ ಖಾನ್​ ಅವರು ಭಾಗಿಯಾದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಮಾಮ್ ಹಾಗೂ ಶಾಲು ಹಾಕಿ ಸಚಿವ ಜಮೀರ್ ಅಹಮ್ಮದ್ ಅವರು ಸನ್ಮಾನಿಸಿದರು.

ಪ್ರಾರ್ಥನೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ಇಡೀ ಭಾರತ ದೇಶದಲ್ಲಿ ಬಕ್ರೀದ್‌ ಹಬ್ಬವನ್ನು ಆಚರಿಸಲಾಗುತ್ತಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಎಲ್ಲ ಮುಸ್ಲಿಂ ಬಾಂಧವರು ಪ್ರಾರ್ಥಿಸಿದ್ದೀರಿ. ಎಲ್ಲರಿಗೂ ಬಕ್ರೀದ್‌ ಹಬ್ಬದ ಶುಭಾಶಯಗಳು” ಎಂದು ಹೇಳಿದರು.

“ಈ ದೇಶ ಬಹುತ್ವದ ದೇಶ. ಹೀಗಾಗಿ ಮನುಷ್ಯತ್ವ ಬಹಳ ದೊಡ್ಡದು. ಪರಸ್ಪರ ಪ್ರೀತಿಸಬೇಕು. ಎಲ್ಲರಲ್ಲೂ ಸಹಿಷ್ಣುತೆ ಗುಣ ಬರಬೇಕು. ಎಲ್ಲ ಧರ್ಮಗಳನ್ನು ಗೌರವಿಸುವ ಮನೋಭಾವನೆ ಎಲ್ಲರಲ್ಲೂ ಮೂಡಬೇಕು” ಎಂದು ಮನವಿ ಮಾಡಿದರು.

“ಸರ್ವಧರ್ಮದಲ್ಲಿ ನಂಬಿಕೆ ಇಟ್ಟವರು ನಾವು. ಸಂವಿಧಾನದಲ್ಲಿ ನಂಬಿಕೆ ಇದೆ ಹಿಂದೂಗಳು, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ಎಲ್ಲ ಧರ್ಮದ ಜನರಿಗೆ ನಮ್ಮ ಸರ್ಕಾರ ರಕ್ಷಣೆ ಕೊಡಲು ಸಿದ್ಧವಿದೆ. ನಾಡಿಗೆ ಒಳ್ಳೆಯ ಮಳೆಯಾಗಲಿ, ಉತ್ತಮ ಬೆಳೆ ಬರಲಿ” ಎಂದು ಆಶಿಸಿದರು.

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾದ ಹಿನ್ನೆಲೆಯಲ್ಲಿ ಮೈದಾನದ ಸುತ್ತ ಬಿಗಿ ಬಂದೋಬಸ್ತ್​ ಮಾಡಲಾಗಿತ್ತು. ಪ್ರಾರ್ಥನೆ ಮುಗಿಯುವ ತನಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.