ಬೆಳಗಾವಿ: “ಜ್ಞಾನ ಗಳಿಸುವುದು ದೇವರ ಶ್ರೇಷ್ಠ ದಾಸರ ಗುಣವಾಗಿದೆ”; ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಹಮ್ಮದ್ ಇಕ್ಬಾಲ್ ಮುಲ್ಲಾ

0
349

ಸನ್ಮಾರ್ಗ ವಾರ್ತೆ

ಬೆಳಗಾವಿ: “ಜ್ಞಾನ ಗಳಿಸುವುದು ದೇವರ ಶ್ರೇಷ್ಠ ದಾಸರ ಗುಣವಾಗಿದೆ. ನಾವು ಶಿಕ್ಷಣದ ವಿಷಯದಲ್ಲಿ ಸ್ವಲ್ಪದರಲ್ಲೇ ತೃಪ್ತಿ ಪಡದೆ, ಜೀವನಪರ್ಯಂತ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಲೇ ಇರಬೇಕು” ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಸಮಿತಿ ಸದಸ್ಯ ಮುಹಮ್ಮದ್ ಇಕ್ಬಾಲ್ ಮುಲ್ಲಾ ಹೇಳಿದರು.

ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ, ಬೆಳಗಾವಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡಿ, “ಈ ಜಗತ್ತಿಗೆ ಒಬ್ಬನೇ ದೇವನಿದ್ದಾನೆ. ಆತನು ನಮ್ಮನ್ನು ಸದಾ ನೋಡುತ್ತಿರುತ್ತಾನೆ. ಆತನ ಮುಂದೆ ಒಂದು ದಿನ ನನ್ನ ಬದುಕಿನ ಲೆಕ್ಕವನ್ನು ಸಮರ್ಪಿಸಬೇಕಾಗುತ್ತದೆ ಎಂಬ ಸತ್ಯವನ್ನು ಮನುಷ್ಯ ಮರೆತಾಗ, ಆತ ಸ್ವಾರ್ಥಿಯಾಗುತ್ತಾನೆ ದೇವರನ್ನು ಗುರುತಿಸಿ, ಆತನ ಆಜ್ಞೆಯಂತೆ ಬದುಕುವುದೇ ನಿಜವಾದ ಜ್ಞಾನವಾಗಿದೆ” ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಶಾಹಿದ್ ಮೆಮನ್ ಮಾತನಾಡಿ, “ಇಂದು ಪಾಲಕರು ಮಕ್ಕಳ ಮನಸ್ಥಿತಿಯನ್ನು ಅರಿತು ಅವರನ್ನು ತಿದ್ದುವವರಾಗಬೇಕು. ಒಳ್ಳೆಯ ವಿಚಾರಗಳು ಮತ್ತು ಉತ್ತಮ ಬೋಧನೆಗಳು ಮಕ್ಕಳ ಬದುಕನ್ನು ಬದಲಾಯಿಸಬಲ್ಲವು” ಎಂದರು.

ಮುಖ್ಯ ಅತಿಥಿಗಳಾದ ಡಾ. ಇರ್ಫಾನ್ ಗುಲ್ಬರ್ಗ, ಸಿ.ಇ.ಓ., ಅಲ್ ಅಮೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಎಜಾಝ್ ಅಹ್ಮದ್ ಲೋಧಿ, ಉಪಾಧ್ಯಕ್ಷರು, ಬಾಷಿಬಾನ್ ಎಜುಕೇಶನ್ ಸೊಸೈಟಿ, ಬೆಳಗಾವಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬೋರ್ಡ್ ವತಿಯಿಂದ ಸಿದ್ಧಪಡಿಸಲಾದ “ದೀನೇ ಇಸ್ಲಾಂ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೋರ್ಡ್ ವತಿಯಿಂದ ಸರ್ಟಿಫಿಕೇಟ್ ಹಾಗೂ ಬಹುಮಾನವನ್ನು ವಿತರಿಸಲಾಯಿತು.

ಜ.ಇ.ಹಿಂದ್ ಸ್ಥಾನಿಕ ಅಧ್ಯಕ್ಷ ಮುಹಮ್ಮದ್ ಮುಹ್ಸೀನ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಬೋರ್ಡ್ ಸ್ಥಾನಿಕ ಸಂಚಾಲಕ ನಿಸಾರ್ ಅಹ್ಮದ್ ಔಟಿ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಜ.ಇ.ಹಿಂದ್ ಜಿಲ್ಲಾ ಸಂಚಾಲಕ ರಿಯಾಝ್ ಅಹ್ಮದ್ ಔಟಿ ಮುಂತಾದವರು ಉಪಸ್ಥಿತರಿದ್ದರು.