ಬೆಂಗಳೂರು: ಡಿ.18ರಂದು ​ಸಾಲಿಡಾರಿಟಿ ರಾಜ್ಯಮಟ್ಟದ ಪ್ರಪ್ರಥಮ ಯುವ ಸಮಾವೇಶ

0
170

ಸನ್ಮಾರ್ಗ ವಾರ್ತೆ

ಬೆಂಗಳೂರು: ‘ಭರವಸೆ – ಮರುನಿರ್ಮಾಣ – ಘನತೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ರಾಜ್ಯಮಟ್ಟದ ಪ್ರಥಮ ‘ಯುವ ಸಮಾವೇಶ’ವನ್ನು ಡಿ.18ರ ಭಾನುವಾರದಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿದೆ” ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಲಬೀದ್ ಶಾಫಿ ತಿಳಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮಾಜದ ನಿರ್ಮಾಣಾತ್ಮಕ ಕೆಲಸಗಳಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಬಹು ಮುಖ್ಯ ಗುರಿ. ಸಮಾಜದಲ್ಲಿ ಶಾಂತಿ, ಪ್ರಗತಿ ಹಾಗೂ ಅಭ್ಯುದಯವನ್ನು ಸಾಧಿಸಲು ಯುವಕರನ್ನು ರಚನಾತ್ಮಕವಾಗಿ ಸಿದ್ಧಗೊಳಿಸುವುದು ಕಾಲದ ಬೇಡಿಕೆ. ಈ ನಿಟ್ಟಿನಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ. ನೈತಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಿಸುವುದು ಸಾಲಿಡಾರಿಟಿಯ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ನಡೆಯಲಿರುವ ಸಮಾವೇಶವು ಹೊಸ ದಿಕ್ಕು ನೀಡಲಿದೆ” ಎಂದರು.

ಈ ಸಮಾವೇಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪ್ರಮುಖ ಚಿಂತಕರು, ವಿದ್ವಾಂಸರು, ಲೇಖಕರು, ಪತ್ರಕರ್ತರು ಭಾಗವಹಿಸಲಿದ್ದಾರೆ. ಪ್ರಮುಖ ಭಾಷಣಕಾರರಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿ, ವಿದ್ವಾಂಸರಾದ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ಜಮಾಅತೆ ಇಸ್ಲಾಮೀ ಹಿಂದ್‌ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ, ಯುವ ನಾಯಕರಾದ ನಹಾಸ್ ಮಾಲ, ಪ್ರಖ್ಯಾತ ವಾಗ್ಮಿಗಳಾದ ಡಾ. ತಾಹಾ ಮತೀನ್, ಮುಹಮ್ಮದ್ ಕುಂಞಿ, ಮಾನವ ಹಕ್ಕು ಹೋರಾಟಗಾರರಾದ ಕೆ ಕೆ ಸುಹೈಲ್, ಲದೀದಾ ಫರ್ಝಾನಾ, ಫಾತಿಮಾ ಶಬರಿಮಾಲ, ಪತ್ರಕರ್ತರಾದ ಆದಿತ್ಯ ಮೆನನ್, ಬಿ.ಎಂ. ಹನೀಫ್, ಪ್ರಶಾಂತ್ ಟಂಡನ್, ವಾಗ್ಮಿ ನಿಕೇತ್ ರಾಜ್ ಮೌರ್ಯ, ಉದ್ಯಮಿ ಹಾಗೂ ಬ್ಯಾರಿ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಮತ್ತಿತರ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಲಬೀದ್ ಶಾಫಿ ತಿಳಿಸಿದರು.

ಬಳಿಕ ಮಾತನಾಡಿದ ಸಂಘಟನೆಯ ರಾಜ್ಯ ಮಾಧ್ಯಮ ಕಾರ್ಯದರ್ಶಿ ನವಾಝ್ ಮಂಗಳೂರು, “ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಯುವಕ – ಯುವತಿಯರು ಭಾಗವಹಿಸಲಿದ್ದಾರೆ. ರಾಜ್ಯದ 10 ಮಂದಿ ಸಾಧಕರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್’ ಪ್ರಶಸ್ತಿ ಪ್ರದಾನಿಸಿ, ಗೌರವಿಸಲಾಗುವುದು ಎಂದು ತಿಳಿಸಿದರು.

“ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ‘ದಿ ಫೈಲ್’ ಸಂಪಾದಕ ಜಿ. ಮಹಾಂತೇಶ್ ಭದ್ರಾವತಿ, ವಿಶ್ವಸಂಸ್ಥೆಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ಸ್ವತಂತ್ರ ತಜ್ಞೆಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಯುವತಿ ಮತ್ತು ಪ್ರಥಮ ಏಷ್ಯನ್ ಎಂಬ ಕೀರ್ತಿಗೆ ಪಾತ್ರರಾದ ಮಾನವ ಹಕ್ಕು ಕಾರ್ಯಕರ್ತೆ ಡಾ. ಅಶ್ವಿನಿ ಕೆ.ಪಿ. ಕೋಲಾರ, ಕರಾವಳಿಯ ಮಂಗಳೂರಿನಲ್ಲಿ ಸ್ನೇಹದೀಪ ಅನಾಥಾಲಯವನ್ನು ಆರಂಭಿಸಿ, ಹೆಚ್.ಐ.ವಿ. ಸೋಂಕಿತ ಮಕ್ಕಳ ಸೇವೆಯನ್ನು ಮಾಡುತ್ತಿರುವ ತಬಸ್ಸುಮ್ ಮಂಗಳೂರು, ಕೋವಿಡ್ ಪೀಡಿತರ ಸೇವೆ ಮಾಡಿದ’ಮರ್ಸಿ ಏಂಜಲ್ಸ್ ಸಂಸ್ಥೆ’ಯ ತನ್ವೀರ್ ಅಹ್ಮದ್, ತ್ಯಾಜ್ಯವನ್ನು ಪುನರ್ ಬಳಕೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುತ್ತಿರುವ ಮನ್ಸೂರ್ ಗೌಸ್, ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮುಹಮ್ಮದ್ ಅಝ್ಮತ್, ಗಣಿತ ಶಿಕ್ಷಣದ ಪ್ರಯೋಗಾಲಯದಲ್ಲಿ ನವೀನ ಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾದ ಶಿಕ್ಷಕ, ದಾವಣಗೆರೆಯ ಶುಹೇಬ್ ಬೇಗ್ ಕೆರೆಬಿಳಿಚಿ, ಕಲೆ ಮತ್ತು ಸಂಸ್ಕೃತಿಯಲ್ಲಿ ಹೊಸ ಆವಿಷ್ಕಾರ ಮತ್ತು ಕ್ಯಾಲಿಗ್ರಫಿ ಮೂಲಕ ಸಾಧನೆ ಮಾಡಿರುವ ಶಿವಮೊಗ್ಗದ ಶೇಖ್ ಮುಹಮ್ಮದ್ ಇದ್ರೀಸ್, ವಿಶೇಷ ಚೇತನರಾದರೂ ತನ್ನ ಪರಿಶ್ರಮದ ಮೂಲಕ ಯುವಜನತೆಗೆ ಸ್ಫೂರ್ತಿ ತುಂಬಿರುವ ಕಲಬುರಗಿಯ ಅಬ್ದುಲ್ ರೆಹಮಾನ್ ಹಾಗೂ ಉದ್ಯೋಗ ಮೇಳವನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಮೂಲಕ ಯುವಜನರಲ್ಲಿ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿ, ಯಶಸ್ಸು ಗಳಿಸಿರುವ ಅಸೋಷಿಯೇಷನ್ ಫಾರ್ ಮುಸ್ಲಿಂ ಪ್ರೊಫೆಷನಲ್ಸ್ (ಎಎಂಪಿ) ಎಂಬ ಎನ್‌ಜಿಒಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್ – 2022’ ಅನ್ನು ಪ್ರದಾನಿಸಲಾಗುವುದು ಎಂದು ಕಾರ್ಯದರ್ಶಿ ನವಾಝ್ ಮಾಹಿತಿ ನೀಡಿದರು.

‘ಮಾಧ್ಯಮ ವಿಶ್ಲೇಷಣೆ ಮತ್ತು ದ್ವೇಷ ಭಾಷಣ: ಒಂದು ಅವಲೋಕನ’ ಎಂಬ ವಿಷಯದಲ್ಲಿ ಮಧ್ಯಾಹ್ನ 2:45ರಿಂದ ಚಾವಡಿ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ  ನವದೆಹಲಿಯ ದಿ ಕ್ವಿಂಟ್‌ನ ಹಿರಿಯ ಪತ್ರಕರ್ತರಾದ ಆದಿತ್ಯ ಮೆನನ್,  ಪ್ರಶಾಂತ್ ಟಂಡನ್,  ಬಿ ಎಂ ಹನೀಫ್ ಬೆಂಗಳೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಹಾನ್ ಉಡುಪಿ, ಸಂಘಟನೆಯ ನಾಯಕರಾದ ಅಖಿಲ್ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.