ಸನ್ಮಾರ್ಗ ವಾರ್ತೆ
ಭಟ್ಕಳ: ವಿದ್ಯಾರ್ಥಿಗಳಲ್ಲಿ ಇತಿಹಾಸದ ಅರಿವು ಹಾಗೂ ಸಂಶೋಧನಾ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (SIO) ಭಟ್ಕಳ ಘಟಕದ ವತಿಯಿಂದ ‘ಇತಿಹಾಸದ ಹೆಜ್ಜೆ ಗುರುತುಗಳು – ಅನ್ವೇಷಿಸಿ, ಸಂಶೋಧಿಸಿ, ಸಂರಕ್ಷಿಸಿ’ (‘Imprints of the Past – Discover, Research, Preserve’) ಎಂಬ ಆಶಯದೊಂದಿಗೆ ಭಟ್ಕಳ ತಾಲೂಕು ಅಂತರ್ ಕಾಲೇಜು ಐತಿಹಾಸಿಕ ಮೇಳವನ್ನು ಸೆ. 3ರಂದು ಆಯೋಜಿಸಲಾಗಿದೆ.
ಹೆಬಳೆ ಗ್ರಾ.ಪಂ. ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ನ ಡಾ. ಎಂ.ಟಿ. ಹಸನ್ ಬಾಪಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9ರಿಂದ 10.30ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಐತಿಹಾಸಿಕ ವಸ್ತು-ಮಾಹಿತಿಗಳ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ. ಸಂಜೆ 3ರಿಂದ 4ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮಕ್ಕೆ ಎಸ್.ಐ.ಓ ಆಫ್ ಇಂಡಿಯಾದ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷ ಕಿದಿಯೂರ್ ನಿಹಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಭಟ್ಕಳದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಶಾಬಂದ್ರಿ ಹಾಗೂ ಮಜ್ಲಿಸೆ ಇಸ್ಲಾಹ್ ವ ತಂಜೀಮ್ ಭಟ್ಕಳದ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಝೀಝುರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಐತಿಹಾಸಿಕ ಮೇಳದಲ್ಲಿ ವಿದ್ಯಾರ್ಥಿಗಳು ಇತಿಹಾಸ, ಸ್ಥಳೀಯ ಪರಂಪರೆ, ಸಂಸ್ಕೃತಿ ಹಾಗೂ ಹಿಂದಿನ ಕಾಲದ ಪ್ರಮುಖ ಘಟನೆಗಳ ಕುರಿತು ಸಂಗ್ರಹಿಸಿ, ಸಂಶೋಧಿಸಿ ಸಿದ್ಧಪಡಿಸಿದ ಮಾಹಿತಿಯನ್ನು ಪ್ರದರ್ಶಿಸಲಿದ್ದಾರೆ. ಮೇಳದಲ್ಲಿ 30,000 ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಮಹಿಳೆಯರನ್ನು ಆಹ್ವಾನಿಸಲಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳೂವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












