ವಿಜಯಪುರ: ಮನಗೂಳಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೀರತ್ ಕಾರ್ಯಕ್ರಮ

0
256

ಸನ್ಮಾರ್ಗ ವಾರ್ತೆ

ವಿಜಯಪುರ, ಆಗಸ್ಟ್ 31: “ಪ್ರವಾದಿ ಮುಹಮ್ಮದ್(ಸ) ಅವರು ತಂದ ಕ್ರಾಂತಿ ಕೇವಲ ರಾಜಕೀಯ ಕ್ರಾಂತಿಯಾಗಿರಲಿಲ್ಲ. ಅದೊಂದು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು. ಮನುಷ್ಯರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವುದೇ ಅವರ ಸಂದೇಶದ ಪ್ರಮುಖ ಉದ್ದೇಶವಾಗಿತ್ತು” ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಅಧ್ಯಕ್ಷರಾದ ಜನಾಬ್ ಸಮದಾನಿ ಕಾಜಿ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್, ವಿಜಯಪುರ ವತಿಯಿಂದ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ, ಆಗಸ್ಟ್ 30ರಂದು ಮನಗೂಳಿ ಗ್ರಾಮದ ದಲವಾಯಿ ಮೊಹಲ್ಲಾ (ಓಣಿ)ಯಲ್ಲಿ ಸೀರತ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವು ಶಂಶುದ್ದೀನ್ ಅವರು ಪವಿತ್ರ ಕುರ್‌ಆನಿನ ಸೂಕ್ತಗಳನ್ನು ಪಠಿಸುವ ಮೂಲಕ ಆರಂಭವಾಯಿತು. ಬಳಿಕ ಓರ್ವ ಸಹೋದರಿ ನಾತ್ ಪಠಿಸಿದರು. ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತರು ವೇದಿಕೆಯಲ್ಲಿದ್ದ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಸ್ಥಳೀಯ ಅಧ್ಯಕ್ಷರಾದ ಜನಾಬ್ ಸಮದಾನಿ ಕಾಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಮಾಅತೆ ಇಸ್ಲಾಮಿ ಹಿಂದ್‌ನ ಪರಿಚಯ ನೀಡಿದ ಅವರು, ಸೀರತ್ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಸಿಂದಗಿ ಕಾಲೇಜಿನ ಪ್ರಾಧ್ಯಾಪಕರೂ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯರೂ ಆದ ಜ. ಬಳಗಾನೂರ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಅವರು ಸಮಾಜದಲ್ಲಿ ಮಹತ್ತರವಾದ ಕ್ರಾಂತಿಯನ್ನು ತಂದರು. ಅವರು ನೀಡಿದ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. “ದೇವರು ಒಬ್ಬನೇ, ಅವನನ್ನೇ ಆರಾಧಿಸಬೇಕು” ಎಂಬುದು ಪ್ರವಾದಿಯವರ ಪ್ರಮುಖ ಸಂದೇಶವಾಗಿತ್ತು. ಬಸವಣ್ಣನವರೂ “ದೇವರು ಒಬ್ಬನೇ, ನಾಮಗಳು ಹಲವು” ಎಂಬ ಸಂದೇಶವನ್ನು ಸಾರಿದ್ದರು. ಪವಿತ್ರ ಕುರ್‌ಆನಿನ ಸೂರತುಲ್ ಮುಲ್ಕ್‌ನಲ್ಲಿ, ಅಲ್ಲಾಹನು ಜೀವ ಮತ್ತು ಮರಣವನ್ನು ಸೃಷ್ಟಿಸಿದವನು ಮತ್ತು ಮನುಷ್ಯರನ್ನು ಪರೀಕ್ಷಿಸುವವನು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಇನ್ನೋರ್ವ ಭಾಷಣಕಾರರಾದ ಜ. ಕದೀರ್ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಅವರು ಮನುಷ್ಯರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸಲು ಹಗಲಿರುಳು ಶ್ರಮಿಸಿದರು. ಅವರು ತಂದ ಕ್ರಾಂತಿ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ; ಅದು ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಸ್ಪರ್ಶಿಸಿದ ಮಾನವೀಯ ಕ್ರಾಂತಿಯಾಗಿತ್ತು ಎಂದು ಹೇಳಿದರು.

ವೇದಿಕೆಯಲ್ಲಿದ್ದ ಜೆಡಿಎಸ್ ಕರ್ನಾಟಕದ ಉಪಾಧ್ಯಕ್ಷರಾದ ಶ್ರೀ ಅಪ್ಪು ಗೌಡ ಪಾಟೀಲ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ. ಪ್ರವಾದಿ ಮುಹಮ್ಮದ್(ಸ) ಅವರು ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.

ಎಪಿಎಂಸಿ ಸದಸ್ಯರಾದ ಶ್ರೀ ವಿಶ್ವನಾಥ ಪಾಟೀಲ ಮಾತನಾಡಿ, ನಾವು ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರೂ ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬದುಕಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ. ಮುಹಮ್ಮದ್ ಯುಸುಫ್ ಕಾಜಿ, ಮಾಜಿ ಸದಸ್ಯರು, ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಅವರು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಮಹತ್ತರವಾದ ಕ್ರಾಂತಿಯನ್ನು ತಂದರು. ಅವರ ಜೀವನ ಮತ್ತು ಸಂದೇಶವನ್ನು ಅರಿತುಕೊಂಡು, ಅವರು ನೀಡಿದ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕೊನೆಯಲ್ಲಿ ಜ. ಶಂಶುದ್ದೀನ್ ಹುಮನಾಬಾದ್ ಅವರು ಧನ್ಯವಾದ ಅರ್ಪಿಸಿದರು.

ವರದಿ: ನಜೀರ್ ಅಹಮದ್ ಕಾಜಿ, ವಿಜಯಪುರ