ಬಿಲ್ಕಿಸ್ ಬಾನು ಪ್ರಕರಣ: ಗುಜರಾತ್ ಸರಕಾರದ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್ ; 11 ಅಪರಾಧಿಗಳಿಗೆ ಮತ್ತೆ ಜೈಲು

0
924

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮುಗಲಭೆಗಳ ಸಂದರ್ಭ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಆರೋಪಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ರದ್ದು ಪಡಿಸಿದೆ.

ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸುವ ಹಕ್ಕು ಗುಜರಾತ್‌ ಸರ್ಕಾರಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲ 11 ಅಪರಾಧಿಗಳು ಮತ್ತೆ ಜೈಲಿಗೆ ಹೋಗಬೇಕಾಗಿದೆ ಎಂದು ಆದೇಶಿಸಿದೆ.

ಗುಜರಾತ್‌ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು 2022ರಲ್ಲಿ ಬಿಡುಗಡೆಗೊಳಿಸಿತ್ತು. ಈ ಘಟನೆ ವಿಪಕ್ಷಗಳು, ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಪರಾಧಿಗಳನ್ನು ಬಿಡುಗಡೆಗೊಳಿಸುವ ಕುರಿತು ತಮಗೂ ಮಾಹಿತಿ ನೀಡಲಾಗಿರಲಿಲ್ಲ ಎಂದು ಸಂತ್ರಸ್ತೆ ಬಿಲ್ಕಿಸ್ ಬಾನು ಹೇಳಿದ್ದರು.

ಬಿಡುಗಡೆಯಾದ ಬೆನ್ನಿಗೇ ಎಲ್ಲಾ ಅಪರಾಧಗಳಿಗೆ ಅದ್ದೂರಿ ಸ್ವಾಗತವೂ ಅವರ ಊರಿನಲ್ಲಿ ದೊರಕಿತ್ತು, ಅವರಲ್ಲಿ ಕೆಲವರು ಓರ್ವ ಬಿಜೆಪಿ ಶಾಸಕ ಹಾಗೂ ಸಂಸದನ ಜೊತೆ ವೇದಿಕೆಯನ್ನೂ ಹಂಚಿಕೊಂಡಿದ್ದರು. ಬಿಡುಗಡೆಗೊಂಡ ಅಪರಾಧಿಗಳಲ್ಲೊಬ್ಬಾತ ರಾಧೇಶ್ಯಾಮ್ ಶಾ ವಕೀಲಿ ವೃತ್ತಿ ಆರಂಭಿಸಿದ್ದ ಎಂಬ ಕುರಿತೂ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಸಂತ್ರಸ್ತೆ ಬಿಲ್ಕಿಸ್ ಬಾನು ಸಹಿತ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 11 ದಿನಗಳ ಕಾಲ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿದ ಕುರಿತಾದ ಮೂಲ ದಾಖಲೆಗಳನ್ನು ಹಾಜರು ಪಡಿಸುವಂತೆಯೂ ಈ ಹಿಂದೆ ಕೇಂದ್ರ ಮತ್ತು ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

1992ರ ಶಿಕ್ಷೆ ಕಡಿತ (ರೆಮಿಷನ್) ನೀತಿಯಾನುಸಾರ ಗುಜರಾತ್‌ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಈ ಕಾನೂನಿನ ಸ್ಥಾನದಲ್ಲಿ 2014ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ ದೊಡ್ಡ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ.

ಬಿಲ್ಕಿಸ್ ಬಾನು ಅಲ್ಲದೇ, ತೃಣಮೂಲ ಕಾಂಗ್ರೆಸ್ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಕ್ಕೋ ವಿವಿಯ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸಹಿತ ಹಲವರು ಗುಜರಾತ್ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಈ 11 ಮಂದಿಗೆ 2008ರಲ್ಲಿ ಶಿಕ್ಷೆ ವಿಧಿಸಲಾಗಿದ್ದರಿಂದ 1992 ರ ನೀತಿ ಅವರಿಗೆ ಅನ್ವಯಿಸುತ್ತದೆ ಎಂದು ಗುಜರಾತ್ ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟ‌ರ್ ಜನರಲ್‌ ಎಸ್ ವಿ ರಾಜು ಹೇಳಿದ್ದರು.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗಳ ವೇಳೆ ತಪ್ಪಿಸಿಕೊಳ್ಳುವ ಸಂದರ್ಭ 21 ವರ್ಷದವರಾಗಿದ್ದ ಹಾಗೂ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಮೂರು ವರ್ಷದ ಪುತ್ರಿ ಸಹಿತ ಏಳು ಕುಟುಂಬ ಸದಸ್ಯರನ್ನೂ ಹತ್ಯೆ ಮಾಡಲಾಗಿತ್ತು.