ಎನ್‍ಡಿಎ ತೊರೆದ ಜಿಜೆಎಂ: ಚುನಾವಣೆಯಲ್ಲಿ ಮಮತಾರಿಗೆ ಬೆಂಬಲ ನೀಡುವುದಾಗಿ ಘೋಷಣೆ

0
514

ಸನ್ಮಾರ್ಗ ವಾರ್ತೆ

ಕೊಲ್ಕತಾ,ಅ.22: ಹನ್ನೊಂದು ಗೂರ್ಖಾ ಸಮುದಾಯಗಳನ್ನು ಪರಿಶಿಷ್ಟ ಜಾತಿ ವಿಭಾಗದಲ್ಲಿ ಸೇರ್ಪಡೆಗೊಳಿಸುವ ಮಾತನ್ನು ಪಾಲಿಸದ್ದನ್ನು ಪ್ರತಿಭಟಿಸಿ ಗೂರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಬಿಜೆಪಿ ನೇತೃತ್ವದ ಎನ್‍ಡಿಎಯಿಂದ ಹೊರಬಂದಿದೆ. ಮೂರು ವರ್ಷಗಳಿಂದ ಸಾರ್ವಜನಿಕ ವೇದಿಕೆಗಳಲ್ಲಿ ಅದರ ಸ್ಥಾಪಕ ನಾಯಕ ಬಿಮಲ್ ಗುರಂಗ್‍ರ ಉಪಸ್ಥಿತಿ ಕಂಡು ಬರುತ್ತಿರಲಿಲ್ಲ. ಬುಧವಾರ ಅನಿರೀಕ್ಷಿತವಾಗಿ ಕೊಲ್ಕತಾದಲ್ಲಿ ಕಂಡು ಬಂದರು. ಎನ್‍ಡಿಎಯಿಂದ ಹೊರಬರುವ ವಿವರವನ್ನು ನೀಡಿದರು. 2021ರಲ್ಲಿ ನಡೆಯುವ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸನ್ನು ಬೆಂಬಲಿಸಲಿರುವ ವಿಚಾರವನ್ನು ತಿಳಿಸಿದ್ದಾರೆ.

ಬಿಜೆಪಿಗೆ ಸೂಕ್ತ ಉತ್ತರವನ್ನು ನಾವು ಕೊಡುತ್ತೇವೆ. 2021ರಲ್ಲಿ ಮಮತಾ ಬ್ಯಾನರ್ಜಿ ಮೂರನೇ ಸಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸುತ್ತಿದ್ದೇವೆ ಎಂದು ಗುರುಂಗ್ ಹೇಳಿದರು.

ಕಳೆದ ಬಿಜೆಪಿ ಗೆಲುವಿಗೆ ಜಿಜೆಎಂ ಕಠಿಣ ಪರಿಶ್ರಮ ನಡೆಸಿದೆ. ಆದರೆ ಕೇಂದ್ರ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಕಳೆದ ಆರೂ ವರ್ಷಗಳಲ್ಲಿ ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದ ಬಿಜೆಪಿ ಅದನ್ನು ಪಾಲಿಸಿಲ್ಲ. ಗೂರ್ಖಾ ಲ್ಯಾಂಡ್ ಬೇಡಿಕೆಯನ್ನು ಪಾರ್ಟಿ ತೊರೆದಿಲ್ಲ ಎಂದು ಗುರುಂಗ್ ಹೇಳಿದರು.

ಗೂರ್ಖಾಲ್ಯಾಂಡಿನ ಬೇಡಿಕೆಯಿಂದ ನಾವು ಹಿಂದೆ ಸರಿದಿಲ್ಲ. ನಮ್ಮ ಬೇಡಿಕೆಯನ್ನು ಈಡೇರಿಸುವವರಿಗೆ ಪಾರ್ಟಿ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು. ಗುರುಂಗ್‍ರ ನಿಲುವಿನಿಂದ ಡಾರ್ಜಲಿಂಗ್ ಸಹಿತ ಉತ್ತರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ.

ಗೂರ್ಖಾಲ್ಯಾಂಡ್ ಬೇಡಿಕೆಯನ್ನು ಕಡೆಗಣಿಸಿದ್ದು ಈ ಪ್ರದೇಶದಲ್ಲಿ ಬಿಜೆಪಿ ವಿರೋಧಿ ಭಾವನೆಗೆ ಕಾರಣವಾಗಿದೆ. ಗೂರ್ಖಾಲ್ಯಾಂಡ್ ವಿಷಯದಲ್ಲಿ ಬಿಜೆಪಿ ಮೋಸ ಮಾಡಿದೆ ಎಂದು ಗೂರ್ಖಾ ಟೆರಿಟೊರಿಯಲ್ ಅಡ್ಮಿಸ್ಟ್ರೇಶನ್ ಚೇರ್‍ಮೆನ್ ಅನಿತ್ ಥಾಪ್ಪ ಹೇಳಿದ್ದಾರೆ.