ಅಪ್ರಾಪ್ತ ಪುತ್ರನಿಂದ ಮತ ಚಲಾಯಿಸಿದ ಬಿಜೆಪಿ ನಾಯಕ; ಬೂತ್ ಅಧಿಕಾರಿ ಅಮಾನತು ಎಫ್‌ಐಆರ್ ದಾಖಲು

0
183

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಬಿಜೆಪಿ ನಾಯಕ ವಿನಯ್ ಮೆಹರ್ ಅವರು ತಮ್ಮ ಅಪ್ರಾಪ್ತ ಪುತ್ರನಿಂದ ಮತ ಚಾಲಯಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣ ಸಂಬಂಧ ಮೆಹರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರು ಮತ ಚಲಾಯಿಸಿದ ಬೂತ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಮಂಗಳವಾರ ನಡೆದ 3ನೇ ಹಂತದ ಮತದಾನದ ವೇಳೆ, ಭೋಪಾಲ್‌ನ ಬೆರಾಸಿಯಾ ಮತಗಟ್ಟೆಯಲ್ಲಿ ತಮ್ಮ ಪುತ್ರನ ಮೂಲಕ ಮೆಹರ್ ಅವರು ಮತ ಚಲಾಯಿಸಿದ್ದರು. ಅದನ್ನು ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ವಿಡಿಯೋ ವೈರಲ್ ಆಗಿದ್ದು, ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮತಗಟ್ಟೆಯ ಅಧಿಕಾರಿ ಸಂದೀಪ್ ಸೈನಿ ಅವರನ್ನು ಅಮಾನತುಗೊಳಿಸಲಾಗಿದೆ.

14 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡು, ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಾಬೆಲೆ, “ಬಿಜೆಪಿಯ ಜಿಲ್ಲಾ ಪಂಚಾಯಿತಿ ಸದಸ್ಯ ವಿನಯ್ ಮೆಹರ್ ಅವರು ತಮ್ಮ ಅಪ್ರಾಪ್ತ ಮಗ ಮತ ಚಲಾಯಿಸುವಂತೆ ಮಾಡಿದ್ದಾರೆ. ವಿಡಿಯೋ ಮಾಡಿ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ” ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಮತಗಟ್ಟೆಗೆ ಮೊಬೈಲ್ ಫೋನ್‌ ತೆಗೆದುಕೊಂಡು ಹೋಗಲು ಹೇಗೆ ಅನುಮತಿ ನೀಡಲಾಯಿತು. ರೆಕಾರ್ಡಿಂಗ್ ಮಾಡಿಕೊಳ್ಳಲು ಅವಕಾಶ ನೀಡಿದ್ದು ಯಾಕೆ ಎಂದು ಕಾಂಗ್ರೆಸ್‌ ಕೇಳಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೋಪಾಲ್ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್, “ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮತಗಟ್ಟೆ ಅಧ್ಯಕ್ಷರು ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಬಾಲಕ ಇವಿಎಂನಲ್ಲಿ ಬಿಜೆಪಿ ಚಿಹ್ನೆಯ ಬಟನ್‌ಅನ್ನು ಒತ್ತುತ್ತಿರುವುದು ಮತ್ತು VVPAT ಮೂಲಕ ಮತವನ್ನು ನೋಂದಾಯಿಸಲಾಗಿದೆ ಎಂಬುದನ್ನು ತೋರುತ್ತಿರುವುದು ಕಂಡುಬಂದಿದೆ.

LEAVE A REPLY

Please enter your comment!
Please enter your name here