ಪ್ರಧಾನಿ ಮೋದಿ ಜತೆ ಬಹಿರಂಗ ಚರ್ಚೆ; ಆಹ್ವಾನ ಒಪ್ಪಿಕೊಂಡ ರಾಹುಲ್ ಗಾಂಧಿ

0
181

ಸನ್ಮಾರ್ಗ ವಾರ್ತೆ

ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾಹ್ ಹಾಗೂ ಹಿರಿಯ ಪತ್ರಕರ್ತ ಎನ್. ರಾಮ್ ಅವರು ಹಾಲಿ ಲೋಕಸಭೆ ಚುನಾವಣೆ ಕುರಿತು ಬಹಿರಂಗ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರು.

ಈ ಆಹ್ವಾನದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ನಾನು ಯಾವುದೇ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ” ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಸಮೃದ್ಧ ಭಾರತ್ ಫೌಂಡೇಶನ್ ಎಂಬ ಎನ್‌ಜಿಓ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಸಂವಿಧಾನ ಸಮ್ಮೇಳನ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ನಡೆದ ಸಂವಾದದ ವೇಳೆ ನೆರೆದಿದ್ದ ಸಭಿಕರೋರ್ವರು ಪ್ರಧಾನಿ ಮೋದಿ ಜೊತೆಗೆ ಬಹಿರಂಗ ಚರ್ಚೆಗೆ ಆಹ್ವಾನವಿರುವ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ನಾನು ಯಾವುದೇ ವೇದಿಕೆಯಲ್ಲಿ ‘ಸಾರ್ವಜನಿಕ ಸಮಸ್ಯೆಗಳ’ ಕುರಿತು ಪ್ರಧಾನಿಯೊಂದಿಗೆ ಚರ್ಚೆ ನಡೆಸಲು ಶೇ.100ರಷ್ಟು ಸಿದ್ಧನಿದ್ದೇನೆ. ಆದರೆ ನನಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತಿಳಿದಿದೆ. ಅವರು ನನ್ನೊಂದಿಗೆ 100% ಚರ್ಚೆ ಮಾಡುವುದಿಲ್ಲ” ಎಂದು ಹೇಳಿದರು.

ಆ ಮೂಲಕ ನಿವೃತ್ತ ನ್ಯಾಯಾಧೀಶರು ಹಾಗೂ ಹಿರಿಯ ಪತ್ರಕರ್ತರು ನೀಡಿದ್ದ ಬಹಿರಂಗ ಚರ್ಚೆಯ ಆಹ್ವಾನವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಅಲ್ಲದೇ, ತಾನು ನೀಡಿರುವ ಹೇಳಿಕೆಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲಾಗಿದೆ.

ಚರ್ಚೆಯ ಆಹ್ವಾನ ನೀಡಿದ್ದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾಹ್ ಹಾಗೂ ಹಿರಿಯ ಪತ್ರಕರ್ತ ಎನ್. ರಾಮ್ ಅವರು, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

ಪತ್ರದಲ್ಲಿ, “ದೇಶದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಭಾರತದ ನಾಗರಿಕರಾಗಿ ನಾವು ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ನಾವು ನಂಬುವ ಪಕ್ಷಪಾತ ರಹಿತ ಹಾಗೂ ಪ್ರತಿಯೊಬ್ಬ ನಾಗರಿಕನ ಹಿತದೃಷ್ಟಿಯ ಪ್ರಸ್ತಾವದೊಂದಿಗೆ ನಾವು ನಿಮ್ಮನ್ನು ಸಂಪರ್ಕಿಸಿದ್ದೇವೆ. ನಾವು ಎರಡೂ ಕಡೆಯಿಂದ ಆರೋಪಗಳು ಹಾಗೂ ಸವಾಲುಗಳನ್ನು ಮಾತ್ರ ಕೇಳಿದ್ದೇವೆ. ಯಾವುದೇ ಅರ್ಥಪೂರ್ಣ ಪ್ರತಿಕ್ರಿಯೆಯನ್ನು ಕೇಳಿಲ್ಲ. ನಮಗೆ ತಿಳಿದಿರುವಂತೆ ಇಂದಿನ ಡಿಜಿಟಲ್ ಜಗತ್ತು ತಪ್ಪು ಮಾಹಿತಿ, ತಪ್ಪು ನಿರೂಪಣೆಯ ಪ್ರವೃತ್ತಿಯನ್ನು ಒಳಗೊಂಡಿದೆ. ಈ ಸಂದರ್ಭ ಚರ್ಚೆಯ ಎಲ್ಲಾ ಆಯಾಮಗಳ ಕುರಿತು ಸಾರ್ವಜನಿಕರಿಗೆ ಉತ್ತಮ ಅರಿವು ಮೂಡಿಸುವುದು ಮುಖ್ಯವಾದ್ದರಿಂದ ತಿಳುವಳಿಕೆಯೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇದು ಸಾಧ್ಯವಾಗಲಿದೆ” ಎಂದು ಉಲ್ಲೇಖಿಸಿದ್ದರು.

LEAVE A REPLY

Please enter your comment!
Please enter your name here