ಬಾಲಕ ನಿಶ್ಚಿತ್ ಅಪಹರಣ, ಸುಟ್ಟು ಕೊಲೆ : ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

0
671

ಸನ್ಮಾರ್ಗ ವಾರ್ತೆ

ಬೆಂಗಳೂರು: ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕ ನಿಶ್ಚಿತ್ (13)‌ನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.

ಟ್ಯೂಷನ್ ಮುಗಿಸಿ ಬರುತ್ತಿದ್ದ ನಿಶ್ಚಿತ್‌ನನ್ನು ಅಪಹರಿಸಿದ್ದ ಆರೋಪಿಗಳು, ಬಾಲಕನ ಪೋಷಕರಿಂದ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ರಾತ್ರಿ 8 ಗಂಟೆಯಾದರೂ ಮಗ ಮನೆಗೆ ಬಾರದ ಕಾರಣ ನಿಶ್ಚಿತ್ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊದಲಿಗೆ ಹೆತ್ತವರು 5 ಲಕ್ಷ ನೀಡಲು ಮುಂದಾಗಿದ್ದರು. ಆದರೆ ಪೋಲೀಸರಿಗೆ ವಿಷಯ ತಿಳಿದ ಕುರಿತು ಮನಗಂಡ ಆರೋಪಿಗಳು, ಬಾಲಕನನ್ನು ಕಗ್ಗಲಿಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರನ್ನು ಪೊಲೀಸರು ಕಗ್ಗಲಿಪುರ ಅರಣ್ಯದಲ್ಲಿ ಪತ್ತೆಹಚ್ಚಿದ್ದಾರೆ. ತಡರಾತ್ರಿ ನಡೆದ ಕಾರ್ಯಾಚರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದರು. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಇಬ್ಬರೂ ಅಪಹರಣಕಾರರನ್ನು ಚಿಕಿತ್ಸೆಗಾಗಿ ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣದ ಮಾಸ್ಟರ್ ಮೈಂಡ್ ಗುರುಮೂರ್ತಿ ಎಂದು ಪೊಲೀಸರು ಹೇಳಿದ್ದಾರೆ. ಆತ ಈ ಹಿಂದೆ ನಿಶ್ಚಿತ್‌ನ ಕುಟುಂಬದೊಂದಿಗೆ ‘ಸ್ಪೇರ್ ಡ್ರೈವರ್’ ಆಗಿ ಕೆಲಸ ಮಾಡಿದ್ದನು. ಇದು ಕುಟುಂಬ ಮತ್ತು ಆರೋಪಿಗಳ ನಡುವೆ ಇದ್ದ ಸಂಬಂಧವನ್ನು ಸೂಚಿಸುತ್ತದೆ.