ಬಿಎಸ್‌ಎನ್‌ಎಲ್ ಗುತ್ತೆ ಕಾರ್ಮಿಕರ ಕುಟುಂಬಗಳು ಹಸಿವಿನ ತೆಕ್ಕೆಗೆ

0
596

ಸನ್ಮಾರ್ಗ ವಾರ್ತೆ

ಕೇರಳ,ಸೆ.14:ಮನೆಯ ಬಾಡಿಗೆ ಕೊಡಲು ಸಾಧ್ಯವಾಗದೆ ಬಿಎಸ್‌ಎನ್‌ಎಲ್ ಗುತ್ತೆ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು,ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದೆ ಕೆಲವರಿಗೆ ಶಾಲೆಯಿಂದ ನೋಟಿಸ್‌ಗಳು ಬಂದಿದೆ. ಮಕ್ಕಳಿಗೆ ಓಣಂಗೆ ಹೊಸ ಬಟ್ಟೆ ಕೊಡಿಸಲು ಆಗದೆ ಹೆತ್ತವರು ನೊಂದು ಕೊಂಡಿದ್ದಾರೆ. ಬಿಎಸ್‍ಎನ್‍‌ಎಲ್ ಕೇರಳದ ಗುತ್ತೆ ಕಾರ್ಮಿಕರ ಬವಣೆಯಿದು.

ಗುತ್ತೆ ಕಾರ್ಮಿಕರು ಆರು ಸಾವಿರ ಇದ್ದು ಇವರ ಕುಟುಂಬಗಳು ನಿರ್ಗತಿಕವಾಗಿ ಹಸಿವಿನಡೆಗೆ ಸಾಗಿವೆ. ಹೇಳಲಿಕ್ಕೊಂದು ಕೆಲಸ ಇದೆ. ಆದರೆ ಸಂಬಳ ಇಲ್ಲ ಎಂಬ ಅವಸ್ಥೆ ಕಳೆದ ಏಳು ತಿಂಗಳಿಂದ ಇವರು ಎದುರಿಸುತ್ತಿದ್ದಾರೆ. ಕಳೆದ ಫೆಬ್ರುವರಿಯಿಂದ ವೇತನ ಸಿಕ್ಕಿಲ್ಲ.

ಜೂನ್ 24ರಿಂದ ತಿರುವನಂತಪುರಂ ಚೀಫ್ ಜನರಲ್ ಮ್ಯಾನೇಜರ್ ಮತ್ತು ಜುಲೈ ಒಂದರಿಂದ ಜಿಲ್ಲಾ ಜನರಲ್ ಮ್ಯಾನೇಜರ್ ಕಚೇರಿ ಮುಂದೆ ಸತ್ಯಾಗ್ರಹ ನಡೆಯುತ್ತಿದೆ. ವೇತನ ಹೆಚ್ಚಳ, ಹೆಚ್ಚು ಸೌಲಭ್ಯಕ್ಕಾಗಿ ಅಲ್ಲ. ಮಾಡಿದ ಕೆಲಸಕ್ಕೆ ಸಂಬಳ ಕೊಡಿ ಎಂದು ಸತ್ಯಾಗ್ರಹ ನಡೆಯುತ್ತಿದೆ.

ಸ್ಕಿಲ್ಡ್ ಕಾರ್ಮಿಕರಿಗೆ ದಿನದಲ್ಲಿ 351 ರೂಪಾಯಿ ಜೊತೆಗೆ ಕ್ಷಾಮ ಬತ್ತೆಯಾಗಿ 100-150 ರೂಪಾಯಿ ಇವರ ಸಂಬಳ.ಹತ್ತು ವರ್ಷಗಳಿಂದಲೂ ಈ ರೀತಿ ಕೆಲಸ ಮಾಡುತ್ತಿರುವವರು ಇದ್ದಾರೆ. ವೇತನ ಕೊಡದಿದ್ದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಮತ್ತು ಕೋರ್ಟು ಹೇಳಿದೆ. ಆದರೂ ಇವರ ಬದುಕಿನ ಅಂಧಕಾರ ಕೊನೆಗೊಂಡಿಲ್ಲ.

ಆರ್ಥಿಕ ಮುಗ್ಗಟ್ಟಿನ ಹೆಸರಿನಲ್ಲಿ 2018ರ ಸೆಪ್ಟಂಬರ್‍ ನಿಂದ ವೇತನ ತಡವಾಗತೊಡಗಿತು. 2019ಎಪ್ರಿಲ್ 20ಕ್ಕೆ 56 ವರ್ಷ ಆಗಿರುವವರನ್ನು ಕೆಸಲದಿಂದ ನಿವೃತ್ತಿಗೊಳಿಸಲು ಬಿಎಸ್‌ಎನ್‌ಎಲ್ ಆದೇಶ ಹೊರಡಿಸಿತು. ಕೇರಳದಲ್ಲಿ ಎಪ್ರಿಲ್‌ ತಿಂಗಳೊಂದರಲ್ಲಿಯೇ 2,000 ಮಂದಿಯನ್ನು ಕೆಲಸದಿಂದ ತೆರವುಗೊಳಿಸಲಾಗಿದೆ. ಅವರು ಮಾಡಿದ್ದ ಕೆಲಸಕ್ಕೆ ಸಂಬಳವನ್ನೂ ಪಾವತಿಸಿಲ್ಲ. ಕೇರಳದಲ್ಲಿ ಹನ್ನೆರಡು ಕೋಟಿ ರೂಪಾಯಿ ಪ್ರತಿ ತಿಂಗಳು ಸಂಬಳಕ್ಕೆ ಬೇಕಾಗುತ್ತದೆ.