ಸನ್ಮಾರ್ಗ ವಾರ್ತೆ
ಸೀತಾಪುರ, (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸೀತಾಪುರ ಜಿಲ್ಲಾಡಳಿತವು ಸೋಮವಾರ ಮಿಯಾ ಸರೈ ಛೇದಕದಲ್ಲಿ ಭಾರೀ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಹಲವಾರು ಅಂಗಡಿಗಳು ಮತ್ತು ದಶಕಗಳಷ್ಟು ಹಳೆಯದಾದ ಮಜಾರ್(ದರ್ಗಾ) ಕೆಡವಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಆನಂದ್ ಅವರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಮಹ್ಮದಾಬಾದ್ನ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಮತ್ತು ಯಾವುದೇ ಪ್ರತಿಭಟನೆಗಳು ನಡೆಯದಂತೆ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಅಧಿಕಾರಿಗಳ ಪ್ರಕಾರ, ಧ್ವಂಸಗೊಳಿಸಿದ ಕಟ್ಟಡಗಳು ಮತ್ತು ಅಂಗಡಿಗಳು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು. “ದಶಕಗಳಿಂದ ಇದ್ದ ಈ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವುದು ಅನಿವಾರ್ಯವಾಗಿತ್ತು. ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಬಳಸುವಂತಿಲ್ಲ,” ಎಂದು ಎಡಿಎಂ ನಿತೀಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಆತಂಕ
ಈ ಕ್ರಮವು ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ಆತಂಕ ಮತ್ತು ಭಯವನ್ನು ಹುಟ್ಟುಹಾಕಿದೆ. ಸ್ಥಳೀಯರು ಈ ಕ್ರಮದ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಆದಾಯದ ಮೂಲವನ್ನು ಕಳೆದುಕೊಂಡ ಅಂಗಡಿಯವರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
”ಧಾರ್ಮಿಕ ರಚನೆಗಳು ಆಧ್ಯಾತ್ಮಿಕ ಮೌಲ್ಯವನ್ನು ಹೊಂದಿರುವುದರಿಂದ ಅವುಗಳನ್ನು ಸಂವೇದನಾಶೀಲವಾಗಿ ನಿರ್ವಹಿಸಬೇಕು” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. “ಸರ್ಕಾರವು ಇಂತಹ ತೀವ್ರ ಕ್ರಮ ಕೈಗೊಳ್ಳುವ ಬದಲು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕಾಗಿತ್ತು” ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಕಾರ್ಯಕರ್ತರು ಈ ಘಟನೆಯು ದೇಶದಾದ್ಯಂತ ಮುಸ್ಲಿಂ ಸಮುದಾಯದ ಧಾರ್ಮಿಕ ರಚನೆಗಳ ಮೇಲೆ ನಡೆಯುತ್ತಿರುವ ಏಕಪಕ್ಷೀಯ ಕ್ರಮಗಳ ಮುಂದುವರಿಕೆ ಎಂದು ಆರೋಪಿಸಿದ್ದಾರೆ. ಯಾವುದೇ ಪ್ರಕರಣದ ವಿಚಾರಣೆಯಿಲ್ಲದೆ ಸರ್ಕಾರವು ಇಂತಹ ಸ್ಥಳಗಳನ್ನು ತ್ವರಿತಗತಿಯಲ್ಲಿ ಧ್ವಂಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.












