ಬಾಲಕ ಕ್ವಾರ್ಡನ್‍ಗೆ ಸಿಕ್ಕಿದ್ದು 3.40 ಕೋಟಿ ರೂ.: ದಾನ ಮಾಡುವುದಾಗಿ ಹೇಳಿದ ಹೆತ್ತವರು

0
1047

ಸನ್ಮಾರ್ಗ ವಾರ್ತೆ

ಸಿಡ್ನಿ, ಫೆ. 28: ಕಡಿಮೆ ಎತ್ತರಕ್ಕಾಗಿ ಸಹಪಾಠಿಗಳು ಅಣಕಿಸಿದ್ದರಿಂದ ನೊಂದು ಅತ್ತ ಒಂಬತ್ತು ವರ್ಷದ ಬಾಲಕ ಕ್ವಾರ್ಡನ್‍ಗೆ 4,75,000 ಯುಎಸ್ ಡಾಲರ್ (ಸುಮಾರು 3.40 ಲಕ್ಷ ರೂ.) ದಾನ ರೂಪದಲ್ಲಿ ದಕ್ಕಿದ್ದು, ಅದನ್ನು ಸಮಾಜ ಸೇವೆಗೆ ಬಳಸುವುದಾಗಿ ಹೆತ್ತವರು ತಿಳಿಸಿದ್ದಾರೆ. ಕ್ವಾರ್ಡನ್ ಮತ್ತು ಆತನ ತಾಯಿಗೆ ಡಿಸ್ನಿಲ್ಯಾಂಡ್ ನೋಡಲು ಸಿಕ್ಕಿದ ಹಣ ಇದು. ತಮ್ಮ ವೈಯಕ್ತಿಕ ಸಂತೋಷವನ್ನು ದೂರವಿಟ್ಟು ಇತರರ ಕಷ್ಟ ನಿವಾರಿಸಲು ಈ ಹಣವನ್ನು ಉಪಯೋಗಿಸಲು ಅವರು ನಿರ್ಧರಿಸಿದ್ದಾರೆಂದು ಕ್ವಾರ್ಡನ್‍ನ ಚಿಕ್ಕಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಹಪಾಠಿಗಳ ವ್ಯಂಗ್ಯದಿಂದ ಹೃದಯಕ್ಕೆ ಚೂರಿ ಹಾಕಿದಂತಾಗುತ್ತದೆ ಎಂದು ಹೇಳಿ ಆತ ಅತ್ತ ವೀಡಿಯೊವನ್ನು ಆತನ ತಾಯಿ ಫೇಸ್ ಬುಕ್ ಗೆ ಪೋಸ್ಟ್ ಮಾಡಿದ್ದರು. ಈ ವೀಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ಈ ಸುದ್ದಿಯನ್ನು ಸನ್ಮಾರ್ಗ ಈ ಹಿಂದೆ ಪ್ರಕಟಿಸಿತ್ತು.

ಅಮೆರಿಕದ ಹಾಸ್ಯತಾರೆ ಬ್ರಾಡ್ ವಿಲಿಯಮ್ಸ್ ನೇತೃತ್ವದಲ್ಲಿ ಆನ್‍ಲೈನ್ ಮೂಲಕ ನಡೆದ ಹಣ ಸಂಗ್ರಹದಲ್ಲಿ 4, 75,000 ಯು ಎಸ್ ಡಾಲರ್ ಸಂಗ್ರಹವಾಗಿತ್ತು. ತನ್ನ ಮಗನನ್ನು ಅಪಹಾಸ್ಯ ಮಾಡಿದಂತೆ ಎಷ್ಟೊ ಮಂದಿ ಅತ್ಮಹತ್ಯೆ ಮಾಡಿರಬಹುದು ಎಂದು ಇಂತಹ ಘಟನೆಗಳ ವಿರುದ್ಧ ಸಹಾಯ ಮಾಡಲು ಸಮಾಜ ಸೇವಾ ಸಂಘಟನೆಗಳ ಮೂಲಕ ಹಣವನ್ನು ವ್ಯಯಿಸುವುದಾಗಿ ಕ್ವಾರ್ಡನ್ ನ ತಾಯಿ ಹೇಳಿದರೆಂದು ಅವರ ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.