ಚಿನ್ನದ ವ್ಯಾಪಾರಿಗಳಿಂದ ನೋಟು ನಿಷೇಧದ ಕಾಲದ ವ್ಯಾಪಾರ ವರಮಾನ ಕೇಳಿದ ಆದಾಯ ಇಲಾಖೆ: ವ್ಯಾಪಾರವನ್ನೇ ಕೈಬಿಡಬೇಕಾದೀತೇ ಎಂಬ ಭಯ ವ್ಯಾಪಾರಿಗಳಲ್ಲಿ

0
838

ಸನ್ಮಾರ್ಗ ವಾರ್ತೆ

ಮುಂಬೈ, ಫೆ. 28: ಆದಾಯ ಕಡಿಮೆಯಾಗಿದ್ದರಿಂದ 50,000 ಕೋಟಿ ರೂಪಾಯಿ ಸಂಗ್ರಹಿಸುವ ಉದ್ದೇಶದಿಂದ ದೇಶದ ಚಿನ್ನ, ವಜ್ರ ವ್ಯಾಪಾರಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸು ಜಾರಿಮಾಡಿದೆ. 2016 ನವೆಂಬರ್ ಎಂಟಕ್ಕೆ ನೋಟು ನಿಷೇಧದ ಬಳಿಕ ನಡೆದ ವ್ಯಾಪಾರದ ಎಲ್ಲ ಆದಾಯ ವಿವರವನ್ನು ನೀಡಬೇಕೆಂದು ಮುಂಬೈ ಸಹಿತ ವಿವಿಧ ನಗರಗಳ 15,000 ವ್ಯಾಪಾರಿಗಳಿಗೆ ನೋಟಿಸು ಕಳುಹಿಸಿದೆ. ನಿಷೇಧಿತ 500, 1000 ರೂಪಾಯಿ ನೋಟುಗಳನ್ನು ಉಪಯೋಗಿಸಿ ಜನರು ಚಿನ್ನಾಭರಣಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿ ಈ ಕ್ರಮಕ್ಕೆ ಆದಾಯ ಇಲಾಖೆ ಮುಂದಾಗಿದೆ.

ನೋಟಿಸು ವಿರುದ್ಧ ವ್ಯಾಪಾರಿಗಳು ಮೇಲ್ಮನವಿ ಮಾಡಿಕೊಂಡಿದ್ದರೂ ಅಂದಿನ ವರಮಾನದ ಶೇ. 20 ರಷ್ಟು ಪಾವತಿಸಬೇಕೆಂದು ಸೂಚಿಸಲಾಗಿದೆ. ಇದರೊಂದಿಗೆ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಶೇ. 20ರಷ್ಟು ಕಟ್ಟುವುದು ಈಗಿನ ವ್ಯಾಪಾರಕ್ಕೆ ಪ್ರತಿಕೂಲವಾಗಬಹುದು ಎಂದು ಜ್ಯುವೆಲ್ಲಸ್ ಅಸೋಸಿಯೇಶನ್ ಕಾರ್ಯದರ್ಶಿ ಸುರೇಂದ್ರ ಮೆಹ್ತ ಹೇಳಿದ್ದಾರೆ.

ಪ್ರಕರಣದ ಅಂತಿಮ ತೀರ್ಪು ವ್ಯಾಪಾರಿಗಳ ವಿರುದ್ಧ ಬರಬಹುದೇ ಎಂಬ ಹೆದರಿಕೆ ವ್ಯಾಪಾರಿಗಳಲ್ಲಿದೆ. ಸಾಲಕೊಡಲು ಹಣಕಾಸು ಸಂಸ್ಥೆಗಳು ಹಿಂಜರಿಯುತ್ತಿವೆ. ಒಂದುವೇಳೆ ಕೇಸು ಸೋತರೆ ಶಾಶ್ವತವಾಗಿ ವ್ಯಾಪಾರವನ್ನು ಕೈಬಿಡಬೇಕಾದೀತೆಂದು ಮುಂಬೈ ವ್ಯಾಪಾರಿ ಜೈನ್ ಹೇಳಿದ್ದಾರೆ.