ವ್ಯಾಪಾರ, ವ್ಯವಹಾರ ಎಂದರೆ ಸಹನೆ

0
462

ಖದೀಜ ನುಸ್ರತ್

ಇಸ್ಲಾಮ್ ಧರ್ಮದಲ್ಲಿ ಸಂಪತ್ತಿನ ಒಡೆಯ ಅಲ್ಲಾಹನಾಗಿದ್ದಾನೆ. ಧರ್ಮಸಮ್ಮತವಾಗಿ ಮಾಡುವ ಎಲ್ಲಾ ವ್ಯಾಪಾರಗಳು ಆರಾಧನೆಯಾಗಿದೆ. ಸಂಪತ್ತನ್ನು ಮನುಷ್ಯನು ಯಾವ ರೀತಿ ಸಂಪಾದಿಸುತ್ತಾನೆ ಮತ್ತು ಖರ್ಚು ಮಾಡುತ್ತಾನೆ ಎಂದು ಪರೀಕ್ಷಿಸಲಿಕ್ಕಾಗಿ ನೀಡಲಾಗಿದೆ. ಒಬ್ಬ ವ್ಯಕ್ತಿಯ ಸತ್ಯವಿಶ್ವಾಸ ಮತ್ತು ಸಂಪತ್ತಿನ ಮಧ್ಯೆ ನಿಕಟವಾದ ಸಂಬಂಧ ಇದೆ. ಅವನು ಯಾವ ರೀತಿ ಸಂಪಾದನೆ ಮಾಡುತ್ತಾನೆ ಮತ್ತು ಖರ್ಚು ಮಾಡುತ್ತಾನೆಂಬುದು ಸತ್ಯ ವಿಶ್ವಾಸವನ್ನು ಅವಲಂಬಿಸಿರುತ್ತದೆ. ಯಾರೂ ಸಂಪತ್ತು ತನ್ನ ಶಕ್ತಿಯಿಂದ ಸಂಪಾದಿಸಿದ್ದೇನೆಂದು ಅಹಂಕಾರ ಪಡುವಂತಿಲ್ಲ. ಸುಳ್ಳು ವ್ಯವಹಾರ, ಮೋಸ, ವಂಚನೆ, ಕಳ್ಳತನ, ಲಂಚ, ಬಡ್ಡಿ ವ್ಯವಹಾರ ಮಾಡುವುದು ಸತ್ಯ ವಿಶ್ವಾಸಿಯ ಲಕ್ಷಣವಲ್ಲ.

ಮಾನವನು ತನ್ನ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಿಸಬೇಕೆಂದು ಬಯಸುವುದು ಸಹಜವಾಗಿದೆ. ಅದರಲ್ಲಿಯೂ ಆರ್ಥಿಕವಾಗಿ ಉನ್ನತಿ ಹೊಂದಬೇಕು, ಅತಿ ಹೆಚ್ಚು ಸಂಪಾದನೆ ಮಾಡಬೇಕೆಂಬ ಆಸೆಯು ಎಲ್ಲರಲ್ಲಿಯೂ ಇರುತ್ತದೆ. ಇದು ಉತ್ತಮವೂ ಧರ್ಮ ಸಮ್ಮತವೂ ಆಗಿದೆ. ಆದರೆ ಏಳೆಂಟು ವರ್ಷಗಳ ಇತಿಹಾಸವನ್ನು ನೋಡಿದರೆ ಜಿಎಸ್ ಟಿ, ನೋಟ್ ಬ್ಯಾನ್, ಲಾಕ್ ಡೌನ್ ನಿಂದ ಹೆಚ್ಚಿನವರ ವ್ಯವಹಾರದಲ್ಲಿ ಇಳಿಕೆ, ನಷ್ಟವನ್ನು ಕಾಣುತ್ತಿದ್ದೇವೆ. ಸರಕಾರದ ಹೊಸ ಹೊಸ ಕಾನೂನು, ಸಾಂಕ್ರಾಮಿಕ ರೋಗ, ಪ್ರಕೃತಿವಿಕೋಪ ಇತ್ಯಾದಿ ಹಲವು ಕಾರಣಗಳಿಂದ ಅನಿರೀಕ್ಷಿತವಾಗಿ ಒಂದು ಸುಪ್ರಭಾತದಲ್ಲಿ ನಮ್ಮ ವ್ಯಾಪಾರ ವಹಿವಾಟುಗಳು ಅಸ್ಥವ್ಯಸ್ಥವಾಗುವ ಸಾಧ್ಯತೆ ಇದೆ. ರೋಗಿಯಾಗಿ ಆಸ್ಪತ್ರೆಯಲ್ಲಿ ಮಲಗುವ ಸಾಧ್ಯತೆಯೂ ಇದೆ.
ನಿಮ್ಮ ಕೈಯಲ್ಲಿ ಹಣವಿರುವಾಗಲೇ ನಿಮ್ಮ ನಿರುದ್ಯೋಗ, ನಿವೃತ್ತಕಾಲದ ಬಗ್ಗೆ ಆಲೋಚಿಸುತ್ತಾ ಅದಕ್ಕೆ ತಯಾರಿ ನಡೆಸಿರಿ. ಆ ಸಮಯದಲ್ಲಿ ನಿಮಗೆ ಸಹಾಯ ಮಾಡುವವರು ವಿರಳ. ಯಾವುದೇ ಸಮಯದಲ್ಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ತಯಾರಿರಬೇಕು. ಅದಕ್ಕಾಗಿ ನಿಮ್ಮ ಕೈಯಲ್ಲಿ ತುರ್ತುಪರಿಸ್ಥಿತಿ ನಿಧಿಯಿರಬೇಕು.

“ವ್ಯಾಪಾರವೆಂದರೆ 80% ಸಹನೆ. 20% ಕಾರ್ಯಗತಗೊಳಿಸುವುದು.” – ವಾರನ್ ಬಫೆಟ್

ನಿಮ್ಮ ವ್ಯವಹಾರ ನೀವು ನಿರೀಕ್ಷಿಸಿದಂತೆ ನಡೆಯದಿರಬಹುದು, ನಿಮಗೆ ಅನುಭವ ಅರಿವೇ ಇಲ್ಲದಂತಹ ಹಲವಾರು ಹೊಸ ಹೊಸ ಸವಾಲುಗಳನ್ನು ಮತ್ತು ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ನೀವು ನಿರೀಕ್ಷಿಸುವಂತಹ ಹಣ ಮತ್ತು ಲಾಭ ಸಮಯಕ್ಕೆ ಸರಿಯಾಗಿ ಸಿಗದಿರಬಹುದು. ಕೆಲವೊಮ್ಮೆ ನಿಮ್ಮನ್ನು ಸಾಲದಲ್ಲಿ ಸಿಲುಕಿಸಬಹುದು. ಕೆಲವೊಮ್ಮೆ ಜಠಿಲವಾದ ತೀರ್ಮಾನವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ನಷ್ಟ ಸಂಭವಿಸುವ ಸಾಧ್ಯತೆಗಳೂ ಇದೆ. ಇವೆಲ್ಲವನ್ನೂ ಸಹನೆಯಿಂದ ಎದುರಿಸಲು ನಿಮಗೆ ಸಾಧ್ಯವಾದರೆ ಮಾತ್ರ ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು. ಒಂದೋ ಅದು ನಿಮ್ಮ ಜೀವನದ ಅದೃಷ್ಟವನ್ನೇ ಬದಲಾಯಿಸಬಹುದು.

ಯಾವುದೇ ಕಷ್ಟ, ನಷ್ಟ, ಸವಾಲುಗಳಿಲ್ಲದ ವ್ಯಾಪಾರಗಳಿಲ್ಲ. ಒಮ್ಮೆ ನೀವು ವ್ಯಾಪಾರಕ್ಕೆಂದು ಒಂದು ಹೆಜ್ಜೆ ಮುಂದೆ ಇಟ್ಟರೆ ನಂತರ ಮತ್ತೆ ಹಿಂದೆ ತಿರುಗಿ ನೋಡಬೇಡಿರಿ. ಧೈರ್ಯದಿಂದ ಸವಾಲುಗಳನ್ನು ಎದುರಿಸುತ್ತಾ ಮುನ್ನಡೆಯಿರಿ. ನೀವು ಗೆಲ್ಲುವ ಮುಂದೆ ಕೆಲವು ಸೋಲನ್ನು ಅನುಭವಿಸಬೇಕಾದೀತು. ಅದು ನಿಮ್ಮ ಜೀವನದ ದೊಡ್ಡ ನಷ್ಟ ಅಲ್ಲ. ಆ ಸೋಲು ನಿಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ. ಕೆಲವೊಮ್ಮೆ ಸೋಲು ಗೆಲುವಿನ ಅಡಿಪಾಯವಾಗಿರುತ್ತದೆ. ನಿಮ್ಮ ವ್ಯಾಪಾರದಲ್ಲಿ ಅನಗತ್ಯವಾಗಿ ಇನ್ನೊಬ್ಬರೊಂದಿಗೆ ಪೈಪೋಟಿ ಮಾಡಬೇಡಿರಿ. ನೀವು ವಿಜಯಿಯಾಗುತ್ತೀರೆಂಬ ದೃಢವಿಶ್ವಾಸವಿರಬೇಕು. ನಿಮ್ಮಲ್ಲಿ ಪ್ರಸಕ್ತ ಮಾರುಕಟ್ಟೆ ಮತ್ತು ವ್ಯವಹಾರಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸುವ, ಉಪದೇಶ ನೀಡುವ, ಅಗತ್ಯ ಬಂದಲ್ಲಿ ತುರ್ತು ಅಗತ್ಯಗಳಿಗೆ ಹಣ ನೀಡುವ ಮತ್ತು ನಿಮ್ಮ ಕಷ್ಟ ಕಾಲದಲ್ಲಿ ಬೆಂಬಲ ನೀಡುವ ಒಂದು ಕೂಟ ನಿಮ್ಮ ಜೊತೆಗಿರಬೇಕು. ಆರ್ಥಿಕ ಸಂಕಷ್ಟದಲ್ಲಿರುವಾಗ ಮನೆಯವರು ಪುರುಷರಿಗೆ ಮಾನಸಿಕ ಸಾಂತ್ವನ ಮತ್ತು ಬೆಂಬಲ ನೀಡಬೇಕು.

ನಮ್ಮ ದೈನಂದಿನ ಜೀವನದಲ್ಲಿ ವ್ಯವಹಾರಗಳನ್ನು ಮಾಡದೇ ಜೀವಿಸಲು ಸಾಧ್ಯವಿಲ್ಲ. ನೀವು ಯಾರಿಗಾದರೂ ಅಗತ್ಯದ ಸಮಯದಲ್ಲಿ ಸಾಲ ನೀಡಿದ್ದರೆ ಅವರಿಗೆ ಸಮಯಕ್ಕೆ ಮರುಪಾವತಿಸಲು ಸಾಧ್ಯವಾಗದಿದ್ದರೆ ಅವರ ಪರಿಸ್ಥಿತಿ ಸುಧಾರಣೆಯಾಗುವವರೆಗೆ ನಿಮಗೆ ಸಹನೆ ಇರಬೇಕು. ಯಾವಾಗಲು ವ್ಯಾಪಾರವನ್ನು ಮಾಡುವಾಗ ತಮಗೆ ಅನುಭವವಿರುವ ವ್ಯಾಪಾರ ಕ್ಷೇತ್ರಗಳನ್ನು ಮಾತ್ರ ಆಯ್ಕೆ ಮಾಡಬೇಕು. ನಿಮ್ಮ ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬೇಡಿರಿ. ಪಾಲುದಾರಿಕೆಯ ವ್ಯಾಪಾರ ಮಾಡುವಾಗ ಪರಸ್ಪರ ಮಾಡಿದ ಷರತ್ತುಗಳನ್ನು, ಒಪ್ಪಂದವನ್ನು ಹಾಗೂ ಲಾಭ ಮತ್ತು ನಷ್ಟಗಳ ಪಾಲುಗಳ ಬಗ್ಗೆ ವ್ಯಕ್ತವಾಗಿ ಬರೆದು ಸಹಿ ಹಾಕಿರಬೇಕು. ನೀವಿಲ್ಲದ ಸಮಯದಲ್ಲೂ ನಿಮ್ಮ ವ್ಯವಹಾರ ಸುವ್ಯವಸ್ಥಿತ ರೀತಿಯಲ್ಲಿ ನಡೆಯುವ ಯೋಜನೆ ಮಾಡಿರಿ ಮತ್ತು ಉತ್ತಮ ಜವಾಬ್ದಾರಿಯುತ ವ್ಯಕ್ತಿಯನ್ನು ನೇಮಿಸಿರಿ.

ಸಂಪತ್ತಿನ ವಿಷಯದಲ್ಲಿ ನಾವು ಸೋಲಲು ಮುಖ್ಯ ಕಾರಣ ಹಣದ ವಿಷಯದಲ್ಲಿ ಸಹನೆ ಇಲ್ಲದಿರುವುದಾಗಿದೆ. ನಮ್ಮ ಸಮಾಜದಲ್ಲಿ ಹೆಚ್ಚಿನವರಿಗೆ ಹಣ ಕೈಗೆ ಬಂದು ತಲುಪುವುದಕ್ಕಿಂತಲೂ ಮುಂಚೆಯೇ ಖರ್ಚು ಮತ್ತು ವಹಿವಾಟು ಮಾಡಿಯಾಗಿರುತ್ತದೆ. ನಮ್ಮ ಕೈಯಲ್ಲಿ ಹಣವಿರುವಾಗಲೂ ಇಲ್ಲದಿರುವಾಗಲೂ ಸಹನೆ ಬೇಕು. ಬಂಡವಾಳಷಾಹಿಗಳ ಮಾಯಾತಂತ್ರಗಳ ಲೋಕದಲ್ಲಿ ನಾವು ವಾಸಿಸುತ್ತಿದ್ದೇವೆ. ವರ್ಣರಂಜಿತ ಜಾಹೀರಾತುಗಳಲ್ಲಿ ಮತ್ತು ಶಾಪಿಂಗ್ ಮಾಲ್ ಗಳಲ್ಲಿ ಆಫರ್ ಗಳಲ್ಲಿರುವ ವಸ್ತುಗಳನ್ನು ಕಾಣುವಾಗ ನಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸದಿರಲು, ಹಣ ಖರ್ಚು ಮಾಡದಿರಲು ಸಹನೆ ವಹಿಸಬೇಕು. ಹಣ ಖರ್ಚು ಮಾಡುವಾಗ ಅದು ನಮಗೆ ಅಗತ್ಯವಿದೆಯೋ, ಇಲ್ಲವೋ ಎಂದು ಯೋಚಿಸಬೇಕು. ಅನಗತ್ಯ ಸಾಲ, ಬಡ್ಡಿ ವ್ಯವಹಾರ, ಮಾಸಿಕ ಕಂತುಗಳಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸಬೇಕು. ನಮ್ಮ ಸಂಬಂಧಿಕರು ಖರ್ಚು ಮಾಡುತ್ತಿದ್ದಾರೆ, ಸಮಾಜದಲ್ಲಿ ಎಲ್ಲರೂ ಖರ್ಚು ಮಾಡುತ್ತಿದ್ದಾರೆ ಎಂದು ಇತರರ ತೃಪ್ತಿಗಾಗಿ ಮತ್ತು ತೋರಿಕೆಗಾಗಿ ಖರ್ಚು ಮಾಡುವುದು ದುರಂತವಾಗಿದೆ. ಇಂದು ಹೆಚ್ಚಿನವರು ಖರ್ಚು ಮಾಡುವುದರ ಮುಖ್ಯ ಕಾರಣ ಇತರರು ನಮ್ಮನ್ನು ನೋಡಿ ಏನು ಹೇಳಬಹುದು ಮತ್ತು ನಮ್ಮ ಮನೆಗೆ ಬರುವಂತಹ ಅತಿಥಿಗಳು ಏನು ಹೇಳುವರು ಎಂಬುದಾಗಿದೆ. ಆದ್ದರಿಂದ ನೀವು ಯಾರದೇ ಮನೆ, ವಿವಾಹ, ಸಮಾರಂಭಗಳಿಗೆ ಹೋದಾಗ ಅವರ ಹಣ ಮತ್ತು ಆಂತರಿಕ ವಿಷಯ ಮತ್ತು ಸೌಕರ್ಯಗಳ ಬಗ್ಗೆ ವಿಚಾರಿಸಬೇಡಿರಿ. ಯಾರಾದರೂ ಸರಳ ಜೀವನ ನಡೆಸುತ್ತಿದ್ದರೆ ಅವರನ್ನು ಪ್ರಶಂಸಿಸಬೇಕು. ನಮ್ಮ ವರಮಾನದಲ್ಲಿ ಸಂತೃಪ್ತರಾಗುತ್ತಾ ಅಲ್ಲಾಹನಿಗೆ ಸದಾ ಕೃತಜ್ಞತೆಗಳನ್ನು ಸಲ್ಲಿಸುತ್ತಿರಬೇಕು. ನಿಮ್ಮ ಹಣ, ಸಂಪತ್ತು ಮತ್ತು ಸೌಕರ್ಯಗಳ ಬಗ್ಗೆ ಜನರ ಮುಂದೆ ಹೆಮ್ಮೆ ಪಡಬೇಡಿರಿ. ಪವಿತ್ರ ಕುರ್ ಆನ್ ನಲ್ಲಿ ವಿವರಿಸಲಾದ ಒಂದು ಘಟನೆಯಲ್ಲಿ ಒಬ್ಬ ತೋಟದ ಮಾಲಿಕನು ತನ್ನ ಸಂಪತ್ತಿನ ಬಗ್ಗೆ ಅಹಂಕಾರ ಪಟ್ಟಾಗ ಅದು ಸಂಪೂರ್ಣವಾಗಿ ನಾಶವಾಯಿತು ಎಂಬ ಉದಾಹರಣೆಯಿದೆ.

“ನಾನು ನಿನಗಿಂತ ದೊಡ್ಡ ಧನಿಕ ಮತ್ತು ನಿನಗಿಂತಲೂ ಹೆಚ್ಚು ಜನಬಲ ಹೊಂದಿರುತ್ತೇನೆ.” …….. ಕೊನೆಗೆ ಅವನ ಸಂಪೂರ್ಣ ಫಲಗಳು ನಾಶವಾದುವು. (ಪವಿತ್ರ ಕುರ್ ಆನ್)

ಜಗತ್ತಿನಲ್ಲಿ ಹೆಚ್ಚಿನ ಎಲ್ಲಾ ಸಮಸ್ಯೆಗಳಿಗೆ ಪ್ರಾರ್ಥನೆ ಮತ್ತು ಸಹನೆಯಲ್ಲಿ ಪರಿಹಾರವಿದೆ. ನಾಳೆ ಅಥವಾ ಕೆಲವು ದಿನಗಳೊಳಗೆ ಇಂತಿಷ್ಟು ಮೊತ್ತದ ಹಣ ಬೇಕೆಂಬ ಬೇಡಿಕೆಯಿದ್ದರೆ ಅದಕ್ಕೆ ಇರುವ ಪರಿಹಾರ ಸಹನೆ ಒಂದೇ. ಮನುಷ್ಯನು ಬೇಡಿಕೆ ಈಡೇರುವವರೆಗೆ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾ ನಿಕಟನಾಗುತ್ತಾನೆ. ಅವನ ಹೃದಯವು ಮೃದುವಾಗುತ್ತಾ ಅಲ್ಲಾಹನ ಕೃತಜ್ಞ ದಾಸನಾಗಲಿರುವ ಒಂದು ಅವಕಾಶವಾಗಿರುತ್ತದೆ. ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ರಾತ್ರಿ ಹಗಲಾಗುವುದರೊಳಗೆ ನಿರ್ಮಿಸಲು ಅಸಾಧ್ಯ. ಅದರ ಹಿಂದೆ ಅತ್ಯುತ್ತಮ ಯೋಜನೆ, ನಿರಂತರ ಪರಿಶ್ರಮ, ಸಹನೆಯ ಅಗತ್ಯವಿರುತ್ತದೆ.

“ಅಲ್ಲಾಹನು ತನ್ನ ಎಲ್ಲ ದಾಸರಿಗೂ ವಿಶಾಲ ಜೀವನಾಧಾರ ಕೊಟ್ಟು ಬಿಡುತ್ತಿದ್ದರೆ, ಅವರು ಭೂಮಿಯಲ್ಲಿ ದಂಗೆ ಎದ್ದು ಬಿಡುತ್ತಿದ್ದರು. ಆದರೆ ಅವನು ಒಂದು ಪ್ರಮಾಣಕ್ಕನುಸಾರವಾಗಿ ತಾನಿಚ್ಚಿಸಿದಷ್ಟು ಇಳಿಸುತ್ತಾನೆ. ಖಂಡಿತವಾಗಿಯೂ ಅವನು ತನ್ನ ದಾಸರ ಬಗ್ಗೆ ತಿಳಿದಿರುವವನೂ ಅವರನ್ನು ನೋಡುತ್ತಿರುವವನೂ ಆಗಿರುವನು.” (ಪವಿತ್ರ ಕುರ್ ಆನ್ 42: 27)