ಕೃಷಿ ಕಾನೂನು ರೀತಿಯಲ್ಲಿ CAA-NRCಯನ್ನು ರದ್ದುಗೊಳಿಸಬೇಕು: ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೈನಿ

0
269

ಸನ್ಮಾರ್ಗ ವಾರ್ತೆ

ಬೆಂಗಳೂರು: ಒಂದು ವರ್ಷದ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕವಾದಂತಹ ರೈತರ ಪ್ರತಿಭಟನೆಯ ನಂತರ ಕೇಂದ್ರ ಸರಕಾರವು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಸಿಎಎ ಮತ್ತು ಎನ್‌ ಆರ್ ಸಿ ಯನ್ನು ಕೇಂದ್ರವು ತಕ್ಷಣವೇ ಹಿಂದೆಗೆದುಕೊಳ್ಳಬೇಕು. ಜೊತೆಗೆ ಜನರ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಕಾನೂನುಗಳನ್ನು ರಚಿಸುವ ಕಾರ್ಯದಿಂದ ದೂರವಿರಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೈನಿ ಆಗ್ರಹಿಸಿದ್ದಾರೆ.

ಅವರು ಬೆಂಗಳೂರಿನ ಕ್ವಿನ್ಸ್ ರಸ್ತೆಯ ದಾರುಸ್ಸಲಾಮ್ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ನಮ್ಮ ದೇಶವು ವಿವಿಧ ಸಮುದಾಯಗಳು, ಧರ್ಮಗಳು, ಭಾಷೆಗಳು ಮತ್ತು ನಾಗರಿಕತೆಗಳ ತೊಟ್ಟಿಲು ಹಾಗೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಶತಮಾನಗಳಿಂದ ವಿವಿಧ ಧರ್ಮ, ಜನಾಂಗ, ಭಾಷೆ, ಬುಡಕಟ್ಟು, ನಾಗರಿಕತೆ ಮತ್ತು ಸಂಸ್ಕೃತಿಯ ಜನರು ಅನ್ನೋನ್ಯವಾಗಿ ಬೆರೆತು ಜೀವಿಸುತ್ತಿದ್ದಾರೆ. ಆದರೆ, ಇಂದು ಆ ಆಹ್ಲಾದಕರ ಮತ್ತು ಶಾಂತಿಯುತ ವಾತಾವರಣವನ್ನು ಕೋಮುವಾದಿ ಶಕ್ತಿಗಳು ಹಾಳು ಮಾಡಲು, ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಕಂದರವನ್ನು ಸೃಷ್ಟಿಸಲು ಪ್ರಯತ್ನ ನಡೆಸುತ್ತಿವೆ ಎಂದವರು ಟೀಕಿಸಿದರು.

ಪ್ರಜಾಪ್ರಭುತ್ವದ ಹೆಸರಿನಲ್ಲಿ ದೌರ್ಜನ್ಯ, ಪ್ರಜಾಸತ್ತಾತ್ಮಕ ಮೌಲ್ಯಗಳ ಮತ್ತು ಸಂಸ್ಥೆಗಳ ದಿನೇ ದಿನೇ ಹೆಚ್ಚುತ್ತಿರುವ ದೌರ್ಬಲ್ಯಗಳು, ಆಡಳಿತ ಪಕ್ಷದ ತಪ್ಪು ವರ್ತನ, ತಪ್ಪು ನಿರ್ಧಾರಗಳು, ತಪ್ಪು ಕ್ರಮಗಳು ಮತ್ತು ತಪ್ಪು ನೀತಿಗಳು ದೇಶವನ್ನು ದೊಡ್ಡ ಅನೈತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನತ್ತ ತಳ್ಳುತ್ತಿದೆ ಎಂದು ಸಾದತುಲ್ಲಾ ಹುಸೈನಿ ಹೇಳಿದರು.

ಇದರ ಪರಿಣಾಮವಾಗಿ ಅಶಾಂತಿ, ದ್ವೇಷ, ಅನೈತಿಕ, ಸಾಮಾಜಿಕ ಅಂತರ, ಕೋಮು ಉದ್ವಿಗ್ನತೆ, ನಿರುದ್ಯೋಗ, ಹಣದುಬ್ಬರ, ಆರ್ಥಿಕ ಹಿಂಜರಿತ, ಹಸಿವು, ಅರಾಜಕತೆ, ಬಡತನ, ರೈತರ ಆತ್ಮಹತ್ಯೆಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲರ ಮೇಲೆ ದೌರ್ಜನ್ಯಗಳು, ಮುಸ್ಲಿಮರ ಜೀವ, ಆಸ್ತಿ, ನಾಗರಿಕತೆ, ಧರ್ಮ ಮತ್ತು ಸಮುದಾಯದ ಗುರುವಿನ ಮೇಲಿನ ದಾಳಿಗಳು, ಅನ್ಯಾಯದ ಕಾನೂನುಗಳು, ದುಷ್ಕರ್ಮಿಗಳಿಗೆ ಮುಕ್ತ ರಿಯಾಯಿತಿಗಳು ಇತ್ಯಾದಿಗಳು ನಮ್ಮ ದೇಶದಲ್ಲಿ ಬಹಳ ಗಂಭೀರವಾದ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂದು ಅವರು ತಿಳಿಸಿದರು.

ನೈತಿಕ ಪೊಲೀಸ್‌ಗಿರಿ, ಸ್ವಯಂಪ್ರೇರಿತ ಗೂಢಚರ್ಯೆ ಹಾಗೂ ಲವ್ ಜಿಹಾದ್ ಹೆಸರಿನಲ್ಲಿ ಹಿಂಸಾತ್ಮಕ ಘಟನೆಗಳು ದೇಶದ ಶಾಂತಿಯುತ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಲಾಲ್ ಮಾಂಸ ಮತ್ತು ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ ಕೆಲವು ಬೇಜವಾಬ್ದಾರಿ ಮತ್ತು ಹೆಚ್ಚು ಪ್ರಚೋದನಕಾರಿ ಹೇಳಿಕೆಗಳು ಚಲಾವಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಮತಾಂತರ ತಡೆ ಕಾಯ್ದೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಧಾರ್ಮಿಕ ಸ್ಥಳಗಳು ಮತ್ತು ಚರ್ಚ್‌ಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇದು ನಿಲ್ಲಬೇಕು ಎಂದು ಸಾದತ್ತುಲ್ಲಾ ಹುಸೈನಿ ಹೇಳಿದರು.

ಯಾವುದೇ ಧರ್ಮವನ್ನು ಬಲವಂತವಿಲ್ಲದೆ ನಂಬುವ, ಅಳವಡಿಸಿಕೊಳ್ಳುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಮತ್ತು ನಾಗರಿಕ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವುದಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಮುಖಂಡರಾದ ಅಕ್ಟರ್‌ ಅಲಿ, ಮೌಲಾನಾ ಮುಹಮ್ಮದ್ ಯೂಸುಫ್ , ಲಯಿಕ್ ಉಲ್ಲಾ ಖಾನ್ ಉಪಸ್ಥಿತರಿದ್ದರು.