ರಾಮಮಂದಿರ ಅಥವಾ ಗುರುವಾಯೂರ್ ದೇವಸ್ಯಮ್ ಆಡಳಿತ ಮಂಡಳಿಯಲ್ಲಿ ಹಿಂದೂಯೇತರರನ್ನು ಸೇರಿಸಬಹುದೇ?; ವಕ್ಫ್ ಮಸೂದೆ ವಿರುದ್ಧ ಕೆ.ಸಿ.ವೇಣುಗೋಪಾಲ್

0
285

ಸನ್ಮಾರ್ಗ ವಾರ್ತೆ

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸಂಸದ ಕೆ ಸಿ ವೇಣುಗೋಪಾಲ್ ಕಟುವಾಗಿ ಖಂಡಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಆಡಳಿತ ಸಮಿತಿಯಲ್ಲಿ ಮತ್ತು ಗುರುವಾಯೂರು ದೇವಸ್ಯಮ್ ಬೋರ್ಡಿನಲ್ಲಿ ಹಿಂದೂಯೇತರರನ್ನು ಸೇರಿಸಿಕೊಳ್ಳಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. ಈ ಮಸೂದೆಯು ಸಂವಿಧಾನದ ವಿರುದ್ಧ ನಡೆಸಲಾಗುವ ಆಕ್ರಮಣ ಎಂದವರು ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯನ್ನು ಗಮನದಲ್ಲಿಟ್ಟು ಈ ಮಸೂದೆಯನ್ನು ತರಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ದೇಶದ ಮತದಾರರು ನೀಡಿದ ತೀರ್ಪಿನಿಂದ ನೀವು ಪಾಠ ಕಲಿತಿಲ್ಲ. ಆರಾಧನಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ವಖ್ಫ್ ಬೋರ್ಡ್ ಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳುವ ಕುರಿತಂತೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದರು. ಪ್ರತಿಪಕ್ಷಗಳು ಈ ಮಸೂದೆಯ ಕುರಿತಂತೆ ತಪ್ಪು ಅಭಿಪ್ರಾಯಗಳನ್ನು ಪ್ರಚಾರ ಮಾಡುತ್ತಿವೆ. ನ್ಯಾಯ ಲಭಿಸದ ಮುಸ್ಲಿಂ ಸಹೋದರರಿಗೆ ಈ ಮಸೂದೆಯಿಂದ ನ್ಯಾಯ ಸಿಗಲಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಾಗಿ ಈ ಮಸೂದೆಯನ್ನು ನಾವು ಮಂಡಿಸುತ್ತಿಲ್ಲ. ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಬೋರ್ಡ್ ನ ಸಬಲೀಕರಣಕ್ಕಾಗಿ ಮಸೂದೆಯನ್ನು ತಯಾರಿಸಿದ್ದೇವೆ ಎಂದವರು ಹೇಳಿದ್ದಾರೆ.