ಸನ್ಮಾರ್ಗ ವಾರ್ತೆ
ಮೈಸೂರು: ‘ಜಾತಿ ಗಣತಿ ಆಯೋಗವು ನವೆಂಬರ್ನಲ್ಲಿ ಸರಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಹಿಂದೆ ಕಾಂತರಾಜು ಆಯೋಗವು ನೀಡಿದ್ದ ವರದಿಯನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಈಗ ಆಯೋಗಕ್ಕೆ ಹೊಸ ಅಧ್ಯಕ್ಷರಿದ್ದಾರೆ. ಕಾಂತರಾಜು ಆಯೋಗದಂತೆಯೇ ವರದಿ ಸಲ್ಲಿಸಲು ಹೇಳಿದ್ದೇನೆ. ಅವರು ವರದಿ ಸಲ್ಲಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.
ಸರ್ಕಾರದ ಯೋಜನೆಗಳನ್ನು ಎಲ್ಲ ವರ್ಗಗಳ ಜನರಿಗೆ ತಲುಪಿಸಲು ಜಾತಿ ಮತ್ತು ಸಾಮಾಜಿಕ ಗಣತಿ, ಅದರ ಅಂಕಿ- ಅಂಶಗಳು ಅತೀ ಅಗತ್ಯ. ಸಬ್ ಕ ಸಾಥ್ ಸಬ್ಕ ವಿಕಾಸ್ ಎನ್ನುವ ಪ್ರಧಾನಿ ಜಾತಿಗಣತಿಯನ್ನು ವಿರೋಧಿಸುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಈ ಬಾರಿಯ ಮುಂಗಾರಿನಲ್ಲಿ ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದ್ದು, ಒಟ್ಟು 30 ಸಾವಿರ ಕೋಟಿ ಅಂದಾಜು ನಷ್ಟವಾಗಿದೆ. ಆದರೆ ಎನ್ಡಿಆರ್ಎಫ್ ನಿಯಮಾವಳಿಯಂತೆ ರಾಜ್ಯಕ್ಕೆ 74860 ಕೋಟಿ ಪರಿಹಾರ ಕೋರಿದ್ದೇವೆ. ಕೇಂದ್ರದ ಮೂರು ತಂಡಗಳು ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿವೆ. ಯಾವ ಜಿಲ್ಲೆಗೆ ಭೇಟಿ ನೀಡಬೇಕು ಎಂಬುದನ್ನೂ ಅವರೇ ನಿರ್ಧರಿಸಿದ್ದಾರೆ. ಈ ತಂಡಗಳ ವರದಿ ಆಧರಿಸಿ ಕೇಂದ್ರವು ಪರಿಹಾರ ಬಿಡುಗಡೆ ಮಾಡಲಿದೆ’ ಎಂದರು.
‘ರಾಜ್ಯದಲ್ಲಿ ಗ್ಯಾರಂಟಿ ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ. ಬರ ಪರಿಹಾರಕ್ಕೂ ತೊಂದರೆಯಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












