ಪ್ರವಾದಿ(ಸ) ಜೀವನದೊಂದಿಗೆ

0
299

ಸನ್ಮಾರ್ಗ ವಾರ್ತೆ

ಸಾರ್ವಜನಿಕ ರಂಗದಲ್ಲಿ ಮುಸ್ಲಿಮ್ ಮಹಿಳೆಯರ ಪಾತ್ರವೇನೆಂಬ ಪ್ರಶ್ನೆಗೆ ಉತ್ತರವೇ ಸಜ್ಜನರಾದ ಸಹಾಬಿ ವನಿತೆಯರ ಜೀವನ. ಜೀವನದ ಎಲ್ಲ ರಂಗಗಳಲ್ಲಿ ಇವರು ತಮ್ಮದೇ ಆದ ಛಾಪನ್ನು ಉಂಟು ಮಾಡಿದ್ದಾರೆ. ಪ್ರವಾದಿ(ಸ) ಶಿಕ್ಷಣ ಲಭಿಸಿದ ಪ್ರವಾದಿ ಪತ್ನಿಯರು, ಪುತ್ರಿಯರು, ಸಹಾಬಿ ಮಹಿಳೆಯರು ಇಸ್ಲಾಮಿನ ಸತ್ಯಸಾಕ್ಷಿಗಳಾಗಿದ್ದಾರೆ. ಭಿನ್ನ ವ್ಯಕ್ತಿತ್ವ, ಸ್ವಭಾವದವರಾದರೂ ಧರ್ಮ,  ಸಮಾಜ, ಕುಟುಂಬ ಮುಂತಾದ ರಂಗಗಳಲ್ಲಿ ಪ್ರಜ್ವಲಿಸುವ ಉದಾತ್ತ ಮಾದರಿಯಾಗಿದ್ದಾರೆ.

ಉಮ್ಮಹಾತುಲ್ ಮುಅï‌ಮಿನೀನ್‌ಗಳಾದ ಖದೀಜ(ರ), ಆಯಿಶಾ(ರ) ವಿಭಿನ್ನ ಅಂತಸ್ತು ಉಳ್ಳವರಾಗಿದ್ದರು. ಖದೀಜ(ರ) ನಾಡಿನ ವ್ಯಾಪಾರಿಯಾಗಿದ್ದರು. ಮೊದಲೆರಡು ಮದುವೆಯಾಗಿ ಅದರಲ್ಲಿ ಮಕ್ಕಳೂ ಇದ್ದರು. ಅವರೊಂದಿಗಿನ ಜೀವನವು ಪ್ರವಾದಿವರ್ಯರ(ಸ) ಬದುಕಲ್ಲಿ ಮಹತ್ತರ ಬದಲಾವಣೆಯನ್ನು ಉಂಟು ಮಾಡಿತ್ತು. ಅವರು ಪ್ರವಾದಿಯನ್ನು ಮದುವೆಯಾಗುವಾಗ ಅಗರ್ಭ  ಶ್ರೀಮಂತರಾಗಿದ್ದರು. ಆದರೂ ಅವರು ಪ್ರವಾದಿಯ ಸೇವೆಗೈದರು. ಖದೀಜಾ ಎಲ್ಲ ವಿಧದ ಉತ್ತಮ ಗುಣವಿರುವ ಯಥಾರ್ಥ ಸೌಂದರ್ಯವಾಗಿದ್ದರು ಎಂದು ಪ್ರವಾದಿ(ಸ) ವರ್ಣಿಸಿದ್ದಾರೆ. ಅವರು ಒಮ್ಮೆಯೂ ಪ್ರವಾದಿಯೊಂದಿಗೆ ಸಿಟ್ಟಿನಿಂದ ಮಾತಾಡಿರಲಿಲ್ಲ. ಕೋಪದಿಂದ ನೋಡಿರಲಿಲ್ಲ. ಎಲ್ಲ ವೇಳೆಯಲ್ಲಿಯೂ ಪ್ರವಾದಿಯೊಂದಿಗೆ ಮುಗುಳ್ನಗುತ್ತಾ ಸೌಮ್ಯವಾಗಿ ಮಾತಾಡುತ್ತಾ ಅವರನ್ನು ಪ್ರೀತಿಸುತ್ತಿದ್ದರು.

ಹಲವು ರೀತಿಯ ಜೀವನ ಅನುಭವಗಳನ್ನು ದಾಟಿದ ಅವರಿಗೆ ಸಂಕಷ್ಟಗಳನ್ನು ಎದುರಿಸುವುದು ಆಹ್ಲಾದಕರವಾಗಿ ಪರಿಣಮಿಸಿತ್ತು. ಅನೇಕ  ಆರ್ಥಿಕ ಜವಾಬ್ದಾರಿಗಳಿದ್ದರೂ ಕುಟುಂಬಕ್ಕೂ ಸಾಮಾಜಿಕ ಕಾರ್ಯಗಳಿಗೂ ಬೇಕಾಗಿ ಹಣ ಖರ್ಚು ಮಾಡಿದರು. ಮಹಿಳೆಯರು ತಮ್ಮ  ಸಮಸ್ಯೆಗಳನ್ನು ಅವರೊಂದಿಗೆ ಹೇಳುತ್ತಿದ್ದರು. ಮೂರು ವರ್ಷಗಳ ಆರ್ಥಿಕ ದಿಗ್ಬಂಧನದ ಬಳಿಕ ಜೀವನದ ಕೊನೆಯ ದಿನಗಳಲ್ಲಿ  ಅಲ್ಲಾಹನು ಅವರಿಗೆ ಸಲಾಮ್ ಹೇಳುವ ಒಂದು ಸಂಭವವಿದೆ.

ಪ್ರವಾದಿ(ಸ)ರಿಗೆ ವಿಶೇಷ ಆಹಾರವನ್ನು ಖದೀಜ(ರ) ತಯಾರಿಸುತ್ತಿದ್ದರು. ಆಗ ಪ್ರವಾದಿವರ್ಯರ ಮನೆಗೆ ಬರುವ ದಾರಿಯಲ್ಲಿ  ಜಿಬ್ರೀಲ್(ಅ) ಬಂದು ಪ್ರವಾದಿಯೊಂದಿಗೆ ಹೇಳಿದರು, “ಸಂದೇಶವಾಹಕರೇ, ಖದೀಜ ತಮಗಾಗಿ ವಿಶೇಷವಾದ ಆಹಾರವನ್ನು  ತಯಾರಿಸುತ್ತಿದ್ದಾರೆ. ನಿಮ್ಮನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ. ಅವರೊಂದಿಗೆ ಹೇಳಲು ಒಂದು ಸಂದೇಶ ನೀಡಲು ಬಯಸುವೆನು. ಏನೆಂದರೆ, ಅಲ್ಲಾಹನು ಅವರಿಗೆ ಸಲಾಮ್ ಹೇಳಿರುವನು. ಅಲ್ಲಾಹನು ತನ್ನ ದಾಸನಿಗೆ ಸಲಾಮ್ ಹೇಳಲು ತನ್ನ ದೂತನನ್ನು  ಕಳುಹಿಸಿದ್ದಾನೆ! ಅಲ್ಲಾಹನು ಅವರನ್ನು ಎಷ್ಟು ಪ್ರೀತಿಸುತ್ತಾನೆಂದು ತಿಳಿಸಲು ಅವರಿಗೆ ಸಲಾಮ್ ಹೇಳಿರುವುದಾಗಿದೆ.”

ಆಯಿಶಾ(ರ)ರನ್ನು ಪ್ರವಾದಿ(ಸ) ಮದುವೆಯಾಗುವಾಗ ಬಹಳ ಸಣ್ಣ ಪ್ರಾಯದವರಾಗಿದ್ದರು. ಕುಶಾಗ್ರಮತಿ ಹಾಗೂ ಜ್ಞಾನಸಂಪನ್ನೆಯಾಗಿದ್ದರು. ಎಲ್ಲ ಕಡೆಗಳಲ್ಲಿ ಅವರದೇ ಆದ ಹೆಜ್ಜೆಗುರುತುಗಳಿವೆ. ಓರ್ವ ಮುಫ್ತಿಯಲ್ಲಿರುವ ಎಲ್ಲ ಸಾಮರ್ಥ್ಯ ಅವರಲ್ಲಿತ್ತು. ಶರೀಅತ್‌ಗೆ ಸಂಬಂಧಿಸಿದ ವಿಷಯಗಳಾಗಲಿ, ಕರ್ಮ ಶಾಸ್ತ್ರದ ಬಗ್ಗೆಯಾಗಲಿ ಅವರು ಜ್ಞಾನಿಯಾಗಿದ್ದರು. ಒಂದು ಪ್ರತ್ಯೇಕ ವಿಷಯದ  ಬಗ್ಗೆ ಪ್ರವಾದಿ(ಸ)ರ ನಿಲುವೇನೆಂದು ಅರಿಯಬೇಕಾದರೆ ಆಯಿಶಾ(ರ)ರಲ್ಲಿ ತಿಳಿಯಿರಿ ಎಂದು ಹೇಳುತ್ತಿದ್ದರು.

ಆಯಿಶಾರ ಮೇಲೆ ಅಪವಾದ  ಉಂಟಾದಾಗ ಪ್ರವಾದಿ(ಸ) ಓರ್ವ ಸಹಾಬಿಯೊಂದಿಗೆ, “ನಿನಗೆ ಅವಳ ಬಗ್ಗೆ ಏನಾದರೂ ಬೇಡದ ವಿಷಯಗಳು ತಿಳಿದಿದೆಯೇ?”  ಎಂದು ಕೇಳಿದರು. “ಅಲ್ಲಾಹನಾಣೆ, ಆಡುಗಳು ಬಂದು ರೊಟ್ಟಿ ತಿಂದು ಹೋಗುವವರೆಗೆ ಬಹಳ ಹೊತ್ತು ನಿದ್ರಿಸುತ್ತಾರೆ ಎಂದಲ್ಲದೇ ಬೇರೆ ಯಾವ ನ್ಯೂನತೆಯೂ ಅವರಲ್ಲಿಲ್ಲ” ಎಂದು ಹೇಳಿದರು.

ಒಮ್ಮೆ ಆಯಿಶಾ(ರ)ರ ಮನೆಗೆ ಕೆಲವು ಅತಿಥಿಗಳು ಬಂದರು. ಆಯಿಶಾ(ರ)ರಿಗೆ ಚೆನ್ನಾಗಿ ಅಡುಗೆ ಮಾಡಲು ಬರುವುದಿಲ್ಲವೆಂದು ಇನ್ನೋರ್ವ ಪತ್ನಿ ಅವರಿಗೆ ಬೇಕಾದ ಆಹಾರ ತಯಾರಿಸಿ ನೀಡಿದರು. ಆದರೆ ಆಯಿಶಾರು ಅದನ್ನು ಮುಚ್ಚಿಟ್ಟು ತಾನು ತಯಾರಿಸಿದ ಅಡುಗೆಯನ್ನೇ ಅತಿಥಿಗಳಿಗೆ ಬಳಸಿದರು. ಇದನ್ನು ಕಂಡ ಪ್ರವಾದಿ(ಸ) ಅವರೊಡನೆ, “ಇದು ನಿಮ್ಮ ತಾಯಿಯ ಅಸೂಯೆಯಾಗಿದೆ. ನೀವು ಚೆನ್ನಾಗಿ ತಿನ್ನಿರಿ” ಎಂದರು. ಎಷ್ಟು ಸುಂದರವಾಗಿ ಆ ಘಟನೆಯನ್ನು ಪ್ರವಾದಿ ನೆರವೇರಿಸಿದರು. ಚಿಕ್ಕ ಪ್ರಾಯದ ಪತ್ನಿಯ ಮನಸ್ಸನ್ನರಿತು ಅದಕ್ಕನುಸಾರವಾಗಿ ತನ್ನ ನಡವಳಿಕೆಯನ್ನು ಪರಿವರ್ತಿಸುತ್ತಿದ್ದರು.

ಇನ್ನೋರ್ವ ಪತ್ನಿ ಸೌದ(ರ) ಕಪ್ಪು ವರ್ಣದ ಇತಿಯೋಪಿಯದ ಮಹಿಳೆಯಾಗಿದ್ದರು. ಇಂದು ಕಾಣುವ ಎಲ್ಲ ವಂಶೀಯ, ಜನಾಂಗೀಯ ತಾರತಮ್ಯಕ್ಕೆ ಉತ್ತರವಾಗಿ ಅವರ ದಾಂಪತ್ಯವಿತ್ತು. ತನ್ನ ಸ್ವಂತ ಮಕ್ಕಳೊಂದಿಗೆ ಖದೀಜ(ರ)ರ ಮಕ್ಕಳನ್ನೂ ಬೆಳೆಸಿದರು. ಪ್ರವಾದಿಯವರ ನಾಲ್ಕನೇ ಪತ್ನಿ ಉಮರುಬ್ನುಲ್ ಖತ್ತಾಬ್(ರ)ರ ಪುತ್ರಿ ಹಫ್ಸ ಸಣ್ಣ ಪ್ರಾಯದವರಾಗಿದ್ದರು. ಬುದ್ಧಿವಂತೆ ಮತ್ತು ಧರ್ಮ ನಿಷ್ಠೆಯಾಗಿದ್ದರು. ಚರಿತ್ರೆ ವಿವರಿಸುವವರು ಹೇಳುವಂತೆ, ಆಯಿಶಾ(ರ) ಹಾಗೂ ಹಫ್ಸಾ(ರ)ರಿಗಿರುವ ವ್ಯತ್ಯಾಸವೆಂದರೆ, ಆಯಿಶಾ(ರ) ಮೃದುವಾಗಿ ವರ್ತಿಸುವವರಾಗಿದ್ದರು. ಹಫ್ಸಾ(ರ) ಉಮರ್(ರ)ರ ಮಗಳಾದುದರಿಂದ ಭಿನ್ನ ಪ್ರಕೃತಿಯವರಾಗಿದ್ದರು. ಪ್ರವಾದಿಯ ಕೊನೆಯ ದಿನಗಳಲ್ಲಿ ಕುರ್‌ಆನಿನ ಪ್ರತಿಗಳನ್ನು ತೆಗೆದಿಡಲು ಹಫ್ಸರ ಕೈಯಲ್ಲಿ ಕೊಟ್ಟಿದ್ದರು.

ವಿಷಯಗಳನ್ನು ತಿಳಿಯಲು ಪ್ರವಾದಿ ಪತ್ನಿಯರು ಪೈಪೋಟಿ ನಡೆಸುತ್ತಿದ್ದರು. ಉಮ್ಮು ಸಲ್ಮ(ರ)ರು ಸಂಶಯಗಳನ್ನು ಪ್ರವಾದಿಯೊಂದಿಗೆ ನೇರವಾಗಿ ಕೇಳಿ ಪರಿಹರಿಸುತ್ತಿದ್ದರು. ಒಮ್ಮೆ ಅವರು ಪ್ರವಾದಿಯೊಂದಿಗೆ ‘ಯಾ ಅಯ್ಯುಹಲ್ಲಝೀನ ಆಮನೂ’, ‘ಯಾ ಅಯ್ಯುಹ ನ್ನಾಸ್’, ‘ಯಾ ಅಯ್ಯುಹಲ್ ಮುಅï‌ಮಿನೀನ್’ ಎಂದು ಆರಂಭವಾಗುವ ಆಯತ್‌ಗಳಲ್ಲಿ ಅಲ್ಲಾಹನು ಪುರುಷರನ್ನು ಮಾತ್ರ ಅಭಿಸಂಬೋಧಿಸುವ ಲಿಂಗ ತಾರತಮ್ಯವನ್ನು ಪ್ರಶ್ನಿಸಿದ್ದರು. ಪ್ರವಾದಿ ಅವರನ್ನು ಸಮಾಧಾನಿಸುತ್ತಾ ಹೇಳಿದರು, “ಹಾಗೇನೂ ಅಲ್ಲ. ಅಲ್ಲಾಹನು ಪುರುಷ ಮತ್ತು ಸ್ತ್ರೀಯನ್ನು ಸೇರಿಸಿ ಇಡೀ ಮಾನವ ಕುಲವನ್ನೇ ಅಭಿಸಂಬೋಧಿಸಿರುವುದು” ಎಂದರು. ಆದರೂ ಅದು ಅವರಿಗೆ ಸಮಾಧಾನವಾಗ ಲಿಲ್ಲ. ಆಗಲೇ ಸೂರಃ ಅಹ್‌ಝಾಬ್‌ನ ‘ಇನ್ನಲ್ ಮುಅï‌ಮಿನೀನ ವಲ್ ಮುಸ್ಲಿಮಾತ್’ ಎಂಬ ಆಯತ್ ಅವತೀರ್ಣವಾಯಿತು. ಕುರ್‌ಆನಿನ ಲಿಂಗ ಭಾಷೆ ಅರಿಯಲು ಉತ್ಸುಕರಾದ ಓರ್ವ ಮಹಿಳೆಗೆ ಉತ್ತರವಾಗಿ ಈ ಆಯತ್ ಅವತೀರ್ಣಗೊಂಡುದಾಗಿದೆ. ನಮ್ಮ ಯುವತಿಯರು ಫೆಮಿನಿಸಮ್‌ನ ಕುರಿತು ಸಾಮೂಹಿಕ ಲಿಂಗಭೇದದ ಬಗ್ಗೆ ಪ್ರಶ್ನಿಸುವಾಗ ಇದು ಧರ್ಮ, ಅದರ ಬಗ್ಗೆ ಏನೂ ಪ್ರಶ್ನಿಸಬಾರದು. ಆದೇಶಿಸಿರುವುದನ್ನು ಪಾಲಿಸಿದರೆ ಸಾಕು ಎಂದು ಗದರಿಸುವುದಿದೆ. ಆದರೆ ಅವರ ಪ್ರ ಶ್ನೆಗಳನ್ನು ಆಲಿಸಿ ಪರಿಹಾರ ಕಂಡು ಹಿಡಿಯುವುದೇ ಪ್ರವಾದಿ ಚರ್ಯೆ. ಅವರ ತಾಯಿ ಕೇಳಿದ ಪ್ರಶ್ನೆಗಳನ್ನೇ ಇಂದು ಇವರು ಕೇಳುತ್ತಿರುವುದು. ಅದಕ್ಕೆ ಬೇಕಾದ ಉತ್ತರ ಹೇಳುವ ಅರ್ಹತೆಯೂ ಅವರಿಗಿದೆ. ಇಂದಿನ ಕಾಲದ ಸ್ಥಿತಿಯೂ ಅದೇ ರೀತಿಯಾಗಿದೆ ಎಂದು  ಇದೆಲ್ಲಾ ಒಂದು ಮುಖ್ಯ ಸಮಸ್ಯೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆಯಲ್ಲವೇ?

ಒಂದು ಕಥೆ ಹೀಗಿದೆ; ಉಹುದ್ ರಣಾಂಗಣದಲ್ಲಿ ಉಮ್ಮು ಅಮ್ಮಾರ(ರ) ಗಾಯಾಳುಗಳಿಗೆ ನೀರು ನೀಡುತ್ತಾ, ಬ್ಯಾಂಡೇಜ್ ಹಾಕಿ ಆರೈಕೆ  ಮಾಡುತ್ತಿದ್ದರು. ಆ ಸಮಯದಲ್ಲಿ ಪ್ರವಾದಿಯವರು ಬೆಟ್ಟದ ಮೇಲೆ ನಿಲ್ಲಿಸಿದ್ದ ಬಿಲ್ಲುಗಾರರು ಗೆದ್ದೆವೆಂದು ಭಾವಿಸಿ ಅಲ್ಲಿಂದ ಇಳಿಯುವುದನ್ನು ಕಂಡರು. ಪ್ರವಾದಿಯ ಆಜ್ಞೆಯನ್ನು ಪಾಲಿಸುತ್ತಾ ಅಲ್ಲಿಯೇ ನಿಂತವರು ಅವರೊಡನೆ ಆದೇಶ ಲಭಿಸದೆ ನೀವು ಇಲ್ಲಿಂದ ಹೋಗಬಾರದೆಂದು ಹೇಳುತ್ತಿದ್ದರು. ಆಗ ಇಳಿಯುತ್ತಿರುವವರು ಪ್ರವಾದಿ(ಸ) ಹೇಳಿರುವುದನ್ನು ಈ ರೀತಿ ವ್ಯಾಖ್ಯಾನಿಸಿದರು, “ಯುದ್ಧ ನಡೆಯುತ್ತಿರುವಾಗ ಅಲ್ಲಿಂದ ಕದಲದೆ ಇರಲು ಹೇಳಿರುವುದು. ಈಗ ಯುದ್ಧ ಮುಗಿದಿದೆಯಲ್ಲ, ಇನ್ನು ನಮಗೆ ಇಳಿಯಬಹುದು.” ಅವರು ಯುದ್ಧದಲ್ಲಿ ಸಿಕ್ಕಿದ ವಸ್ತುಗಳನ್ನು ಸಂಗ್ರಹಿಸಲು ಹೊರಡುವುದನ್ನು ಕೆಳಭಾಗದಿಂದ ಶತ್ರುಗಳು ಕಂಡರು. ಅವರು ಬೇಗನೇ ಹಿಂಬದಿಯಿಂದ ಪುನಃ ಆಕ್ರಮಣವೆಸಗಲು ಬರಲಾರಂಭಿಸಿದರು.

ಆ ಸಂದರ್ಭದಲ್ಲಿ ಪ್ರವಾದಿವರ್ಯರು ತನ್ನ ಸಂಗಾತಿಗಳು ಅಲ್ಲಿಂದ ಚದುರುವುದನ್ನು ನೋಡಿ ಅವರನ್ನು ಪುನಃ ಕರೆಯಲು ಬೆಟ್ಟದ  ತುದಿಗೆ ಧಾವಿಸಿ ಅವರನ್ನು ಕರೆಯತೊಡಗಿದರು. ಕೆಳಗೆ ನಿಂತ ಉಮ್ಮು ಅಮ್ಮಾರ ನೋಡುವಾಗ ಒಂಟಿಯಾಗಿ ನಿಂತಿರುವ ಪ್ರವಾದಿ(ಸ) ಹಾಗೂ ಹಿಂದಿನಿಂದ ತಂಡೋಪತಂಡವಾಗಿ ಧಾವಿಸುತ್ತಿರುವ ಶತ್ರುಗಳು, ರಕ್ಷಣೆಗಾಗಿ ಬೆಟ್ಟದ ಮೇಲೆ ನಿಲ್ಲಿಸಿದ ಸೈನಿಕರು ಕೆಳಗೆ ಇಳಿದು ಬರುತ್ತಿರುವುದು. ಅವರು ತಕ್ಷಣವೇ ಬೆಟ್ಟದ ತುದಿಗೆ ಓಡಿ ಬಂದು ಶತ್ರುಗಳಿಗೂ ಪ್ರವಾದಿಗೂ ಮಧ್ಯೆ ಗೋಡೆಯಂತೆ ನಿಂತರು. ಹಿಂದಿರುಗಿ ಹೋದ ಕೆಲ ಸೈನಿಕರು ಇದನ್ನು ಕಂಡು ಪುನಃ ಓಡಿ ಬಂದು ಪ್ರವಾದಿ ಹಾಗೂ ಉಮ್ಮು ಅಮ್ಮಾರ(ರ)ರಿಗೆ ರಕ್ಷಣೆಯನ್ನು  ನೀಡಿದರು. ಪ್ರವಾದಿ(ಸ) ಹೇಳುತ್ತಿದ್ದರು, “ನಾನು ಎಡಭಾಗವನ್ನು ನೋಡುವಾಗಲೂ ನನ್ನ ಬಲಭಾಗವನ್ನು ನೋಡುವಾಗಲೂ ಉಮ್ಮು  ಅಮ್ಮಾರರ ಖಡ್ಗವು ಕಾಣುತ್ತಿತ್ತು.” ಯುದ್ಧದಲ್ಲಿ ಅವರಿಗೆ ಹನ್ನೆರಡು ಗಾಯಗಳಾಗಿತ್ತು. ತೋಳಿಗೆ ಉಂಟಾದ ಗಾಯವು ಬಹಳ ಗಂಭೀರವಾಗಿತ್ತು. ಅನೇಕ ದಿನಗಳವರೆಗೆ ಪ್ರಜ್ಞಾಹೀನರಾಗಿ ಮಲಗಿದ್ದರು. ಪ್ರವಾದಿ(ಸ) ಉಮ್ಮು ಅಮ್ಮಾರರ ಬಗ್ಗೆ ವಿಚಾರಿಸುತ್ತಾ  ಅವರ ಬಳಿ ಕುಳಿತು ಪ್ರಾರ್ಥಿಸುತ್ತಾ ಇದ್ದರು. ಅವರಿಗೆ ಎಚ್ಚರವಾದಾಗ ಪ್ರವಾದಿ(ಸ) ಅವರೊಡನೆ ಪ್ರಶ್ನಿಸಿದರು, “ಏ ಉಮ್ಮು ಅಮ್ಮಾರ,  ನನ್ನ ಪ್ರಾಣ ಕಾಪಾಡಿದುದಕ್ಕೆ ನಿನಗೆ ಏನು ನೀಡಬೇಕು?” “ಯಾ ರಸೂಲುಲ್ಲಾಹ್, ನನಗೆ ನಿಮ್ಮೊಂದಿಗೆ ಸ್ವರ್ಗ ಸಿಕ್ಕಿದರೆ ಸಾಕು”  ಎಂದರು. ಆಗ ಪ್ರವಾದಿ ‘ನೀನು ಸ್ವರ್ಗವನ್ನು ಗಳಿಸಿರುವೆ’ ಎಂದು ಉತ್ತರಿಸಿದರು.