ರಾಜ್ಯಕ್ಕೆ ಆಕ್ಸಿಜನ್ ಹೆಚ್ಚಿಸಬೇಕೆಂಬ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ‘ಸುಪ್ರೀಂ’ ಮೊರೆ ಹೋದ ಕೇಂದ್ರ ಸರಕಾರ…!!

0
391

ಸನ್ಮಾರ್ಗ ವಾರ್ತೆ

ನವದೆಹಲಿ: ಕೋವಿಡ್-19 ರೋಗಿಗಳಿಗಾಗಿ ಪ್ರಸ್ತುತ ನೀಡುತ್ತಿರುವ ದೈನಂದಿನ ಧ್ರುವೀಕೃತ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು 965 ಮೆಟ್ರಿಕ್ ಟನ್ ನಿಂದ 1200 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಬೇಕೆಂದು ಕೇಳಿರುವ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರಿಗೆ ಇರಿಸುಮುರಿಸು ಉಂಟು ಮಾಡಿದೆ.

ಬಿಜೆಪಿ ಆಡಳಿತವಿರುವ ಸರಕಾರದ ವಿರುದ್ಧವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತಮ್ಮ ಅವಶ್ಯಕತೆ ಕೇಳಿದ್ದಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋದದ್ದು ಆಘಾತಕಾರಿ ಹಾಗೂ ವಿಪರ್ಯಾಸ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಕರ್ನಾಟಕಕ್ಕೆ 965 ಮೆಟ್ರಿಕ್ ಟನ್ ಧ್ರುವೀಕೃತ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ತುರ್ತಾಗಿ ತಡೆಹಿಡಿಯುವ ಅಗತ್ಯವಿದೆ ಎಂದು ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದೆದುರು ಮನವಿ ಮಾಡಿರುವುದಾಗಿ Bar & Bench. ಟ್ವೀಟ್ ಮಾಡಿದೆ.

ಯಾವುದೇ ಆದೇಶ ನೀಡುವುದರ ಮುನ್ನ ಕಾಗದ ಪತ್ರವನ್ನು ನೋಡಬೇಕಾಗಿದೆ. ಕೆಲ ನಿಮಿಷಗಳಲ್ಲಿ ಇದನ್ನು ಒಟ್ಟುಗೂಡಿಸುವಂತೆ ನ್ಯಾಯಮೂರ್ತಿ ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಹೇಳಿದೆ.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ನರೇಂದ್ರ ಮೋದಿಯವರಿಗೆ ಕರ್ನಾಟಕದ ಜನತೆಯ ಅವಶ್ಯಕತೆ ನೋಡದೆ ಕುರುಡಾಗಿದ್ದಾರಾ? ಮುಖ್ಯಮಂತ್ರಿ ಯಡಿಯೂರಪ್ಪ ನವರು ಕೇಂದ್ರ ಸರಕಾರದ ಈ ಅರ್ಜಿಯ ವಿರುದ್ಧ ಮಾತನಾಡುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.