ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ನಿಂದ ವಿಧಾನಸೌಧಕ್ಕೆ ಮುತ್ತಿಗೆ: ಪೊಲೀಸರಿಂದ ಲಾಠಿ ಚಾರ್ಜ್; ಹಲವರಿಗೆ ಗಾಯ

0
431

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದಲ್ಲಿ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಈ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.

ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರ.ಕಾರ್ಯದರ್ಶಿ ಅನೀಸ್ ಕುಂಬ್ರ ಮಾತನಾಡಿ, ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದರು, ಆದರೆ ಈ ನಿರೀಕ್ಷೆಗೆ ತದ್ವಿರುದ್ದವಾಗಿ ವಾಸ್ತವ್ಯತೆಯಿಲ್ಲದ ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸುವ ಅಸಮರ್ಪಕ ಹಾಗೂ ಅವೈಜ್ಞಾನಿಕವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಕ್ಯಾಬಿನೆಟ್ ಸಭೆ ಕರೆದು ಲೋಕಸಭೆಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಚರ್ಚೆಗೆ ಒಳಪಡಿಸದೆ ಹಿಂಬಾಗಿಲಿನ ಮುಖಾಂತರ ಜಾರಿಗೊಳಿಸಿರುವುದರ ಹಿಂದಿರುವ ದುರುದ್ದೇಶವನ್ನು ಕ್ಯಾಂಪಸ್ ಫ್ರಂಟ್ ಅರಿತಿದೆ. ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಹೊಂದಿದೆ ಎಂದರು.

2016 ರಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಬ್ರಮಣ್ಯಂ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ, ತದನಂತರ ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ತೊಡಕುಗಳ ಕುರಿತು 2019 ರಲ್ಲಿಯೇ ಕ್ಯಾಂಪಸ್ ಫ್ರಂಟ್ ವಿರೋಧ ವ್ಯಕ್ತಪಡಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯಕ್ಕೆ ಶಿಫಾರಸ್ಸು ವರದಿ ನೀಡಿತ್ತು. ಆದರೆ ನಮ್ಮ ಹಾಗೂ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ ಸರ್ವಾಧಿಕಾರಿಯಾಗಿ ಕೈಗೊಂಡ ತೀರ್ಮಾನವಾಗಿದೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಇದನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲವೆಂದರು.

ಪ್ರತಿಭಟನೆಯ ಸಂದರ್ಭದಲ್ಲಿ ಪೋಲೀಸರ ಬೆಂಗಾವಲನ್ನು ಭೇದಿಸಲು ಹೊರಟ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು, ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ಉಪಸ್ಥಿತರಿದ್ದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ವಿವಿಧ ಠಾಣೆಗಳಿಗೆ ಕೊಂಡೊಯ್ದಿದ್ದಾರೆ.

LEAVE A REPLY

Please enter your comment!
Please enter your name here