ನಿಗದಿತ ಸಮಯಾವಧಿಗೂ ಮುನ್ನ ರಾಜಧಾನಿ ಪ್ರವೇಶಿಸಿದ ಐತಿಹಾಸಿಕ ಟ್ರ್ಯಾಕ್ಟರ್ ರ‌್ಯಾಲಿ; ದೇಶದಲ್ಲಿ ವಿವಿಧೆಡೆ 2 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಭಾಗಿ

0
529

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟ ಇಂದು ಸಂಚಲನ ಮೂಡಿಸಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಮುಕ್ತಾಯದ ಬಳಿಕ ಮುಂಜಾನೆ 10ಕ್ಕೆ ರೈತರ ಟ್ರ್ಯಾಕ್ಟರ್ ರ‌್ಯಾಲಿ ರಾಜಧಾನಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಪೊಲೀಸರು ಅಲ್ಲಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದ ಪ್ರತಿಭಟನಾಕಾರರು ನಿಗದಿತ ಅವಧಿಗಿಂತ ಮುನ್ನವೇ ರಾಜಧಾನಿಯನ್ನು ಪ್ರವೇಶಿಸಿದರು.

ಹೀಗಾಗಿ ದೆಹಲಿ-ಹರ್ಯಾಣ ರಾಜ್ಯಗಳನ್ನು ಪ್ರತ್ಯೇಕಿಸುವ ಸಿಂಘು ಗಡಿ ಮತ್ತು ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಟಿಕ್ರಿ ಗಡಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ರಾಷ್ಟ್ರಧ್ವಜಗಳನ್ನು ಹಿಡಿದ ಸಾವಿರಾರು ಮಂದಿ ಜಾಥಾದಲ್ಲಿ ಆಗಮಿಸುತ್ತಿರುವುದು, ಹಲವಾರು ಮಂದಿ ಟ್ರ್ಯಾಕ್ಟರ್‌ಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಕಳೆದ ನವೆಂಬರ್‌ನಿಂದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರಕಾರದೊಂದಿಗಿನ ಹಲವು ಚರ್ಚೆಗಳು ವಿಫಲವಾದ ಬೆನ್ನಿಗೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‌್ಯಾಲಿ ನಡೆಸುವುದಾಗಿ ಘೋಷಿಸಿದ್ದರು.

ಟಿಕ್ರಿ ಗಡಿಯಲ್ಲಿ ರೈತ ಮುಖಂಡರು ಉದ್ವಿಗ್ನ ರೈತರನ್ನು ಸಮಾಧಾನಪಡಿಸುತ್ತಿದ್ದು, ಪ್ರತಿಭಟನಾಕಾರರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ರ‌್ಯಾಲಿಯ ಸಮಯದ ಬಗ್ಗೆ ನಿರ್ಧರಿಸಲು ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಪ್ರತಿಭಟನಾ‌ನಿರತ ರೈತ ಮುಖಂಡರು ಹೇಳಿದ್ದಾರೆ.

ವಿವಿಧ ರಾಜ್ಯಗಳ 2 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಈ ರ್ಯಾಲಿಯಲ್ಲಿ ಭಾಗಿಯಾಗುತ್ತಿದ್ದಾರೆ. ರಾಜಧಾನಿ ಸೇರಿದಂತೆ ಹಲವೆಡೆ ಟ್ರ್ಯಾಕ್ಟರ್‌ಗಳ ಅಭಾವದಿಂದಾಗಿ ಸಾವಿರಾರು ರೈತರು ಕಾಲ್ನಡಿಗೆ ಜಾಥ ಹೊರಟಿದ್ದಾರೆ.