ಸನ್ಮಾರ್ಗ ವಾರ್ತೆ
ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪುನ್ಪಲ್ಲಿಯ ಗ್ರಾಮ ಸಭೆಯು, ಕ್ರಿಶ್ಚಿಯನ್ ಬುಡಕಟ್ಟು ಜನಾಂಗದವರು ತಮ್ಮ ಮೃತರ ದೇಹಗಳನ್ನು ಹೂಳಲು ಅನುಮತಿ ನೀಡುವುದಿಲ್ಲ ಎಂದು ನಿರ್ಧರಿಸಿದ ನಂತರ ವಿವಾದಕ್ಕೆ ಸಿಲುಕಿದೆ. ಧಾರ್ಮಿಕ ಪ್ರಚಾರಕ್ಕಾಗಿ ಗ್ರಾಮಕ್ಕೆ ಪಾಸ್ಟರ್ಗಳು ಪ್ರವೇಶಿಸುವುದನ್ನು ನಿಷೇಧಿಸುವ ಬ್ಯಾನರ್ ಒಂದನ್ನು ಸಹ ಹಾಕಲಾಗಿದೆ. ಧಾರ್ಮಿಕ ಮತಾಂತರ ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಿಲ್ಲ ಎಂದೂ ಆ ಬ್ಯಾನರ್ನಲ್ಲಿ ತಿಳಿಸಲಾಗಿದೆ.
ಪುನ್ಪಲ್ಲಿಯ ಜನಪದ್ ಸದಸ್ಯ ಮದ್ಕಮ್ ಭೀಮ್ ಮಾತನಾಡಿ, ಗ್ರಾಮ ಪಂಚಾಯತ್ ಇತ್ತೀಚೆಗೆ ಅನುಮೋದಿಸಿದ 12 ನಿರ್ಣಯಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ 21 ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ 75 ಸದಸ್ಯರಿದ್ದಾರೆ. ಈ ನಿರ್ಣಯವನ್ನು ಜಾರಿಗೆ ತಂದರೆ, ಶವಗಳನ್ನು 13 ಕಿ.ಮೀ ದೂರದಲ್ಲಿರುವ ಧೋರ್ನಪಾಲ್ನಲ್ಲಿ ಅಥವಾ 40 ಕಿ.ಮೀ ದೂರದಲ್ಲಿರುವ ಸುಕ್ಮಾ ಜಿಲ್ಲಾ ಕೇಂದ್ರದಲ್ಲಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ.
ಸುಕ್ಮಾದಲ್ಲಿ ಇದುವರೆಗೆ ನಾಲ್ಕು ಗ್ರಾಮಗಳು ಇದೇ ರೀತಿಯ ನಿರ್ಣಯಗಳನ್ನು ತೆಗೆದುಕೊಂಡಿವೆ ಎಂದು ವರದಿಯಾಗಿದೆ. ಇದು ಕೆಲವು ತಿಂಗಳ ಹಿಂದೆ ಎರೆಬೋರ್ನಲ್ಲಿ ಪ್ರಾರಂಭವಾಯಿತು. ನಂತರ ಪೋಲಂಪಲ್ಲಿಯಲ್ಲೂ ಇದೇ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಮತ್ತು ಕ್ರಮೇಣ ಇದನ್ನು ಎಲ್ಲಾ ಗ್ರಾಮಗಳಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಈ ಪ್ರದೇಶವು ಸಂವಿಧಾನದ ಐದನೇ ಪರಿಶಿಷ್ಟಕ್ಕೆ ಒಳಪಡುವುದರಿಂದ, 1996 ರ ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆಯನ್ನು ಉಲ್ಲೇಖಿಸಿ ಅಕ್ಟೋಬರ್ 2 ರಂದು ನಡೆದ ಗ್ರಾಮ ಸಭೆಯ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬುಡಕಟ್ಟು ಸಂಸ್ಕೃತಿ, ಪರಂಪರೆ, ಸಾಮಾಜಿಕ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸುವ ಹಕ್ಕು ಗ್ರಾಮ ಸಭೆಗಿದೆ ಮತ್ತು ಪ್ರಚೋದನೆ ಹಾಗೂ ಒತ್ತಡದಂತಹ ಸಾಧನೆಗಳ ಮೂಲಕ ನಡೆಯುವ ಧಾರ್ಮಿಕ ಮತಾಂತರ ಚಟುವಟಿಕೆಗಳು ಇವುಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಬ್ಯಾನರ್ನಲ್ಲಿ ತಿಳಿಸಲಾಗಿದೆ.
ಆದರೆ ಯಾವುದೇ ಭಾರತೀಯ ನಾಗರಿಕರು ಗ್ರಾಮಕ್ಕೆ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ವಕೀಲ ಸುದೀಪ್ ಶ್ರೀವಾಸ್ತವ ತಿಳಿಸಿದ್ದಾರೆ. ಗ್ರಾಮದಲ್ಲಿ ವಾಸಿಸುವ ಕ್ರಿಶ್ಚಿಯನ್ನರ ಮೃತರ ದೇಹಗಳ ಅಂತ್ಯಸಂಸ್ಕಾರಕ್ಕೆ ಜಮೀನು ನೀಡದಿರುವ ನಿರ್ಣಯವು ಅಸಂವಿಧಾನಿಕವಾಗಿದೆ ಎಂದು ಅವರು ಹೇಳಿದರು. ಬಸ್ತರ್ ಪ್ರದೇಶದಲ್ಲಿ ಇಂತಹ ನಿರ್ಣಯ ಕೈಗೊಂಡಿರುವ ಕನಿಷ್ಠ ಹತ್ತನೇ ಗ್ರಾಮ ಇದಾಗಿದೆ ಎಂದು ಬಸ್ತರ್ ಜಿಲ್ಲಾ ಗ್ರಾಮೀಣ ಕ್ರಿಶ್ಚಿಯನ್ ಸೇವಾ ಸಮಿತಿಯ ಉಪಾಧ್ಯಕ್ಷ ನುಕೇಶ್ ಬಘೇಲ್ ತಿಳಿಸಿದ್ದಾರೆ.
ಈ ವರ್ಷದ ಮುಂಚಿತವಾಗಿ ಶವಗಳ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಪ್ರತ್ಯೇಕ ತೀರ್ಪನ್ನು ಕೆಲವು ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದೂ ನುಕೇಶ್ ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ, ಬುಡಕಟ್ಟು ಕ್ರಿಶ್ಚಿಯನ್ಗಳ ಶವಗಳನ್ನು ಬಲವಂತವಾಗಿ ಹೊರತೆಗೆಯುವುದರ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಇದರ ಬೆನ್ನಲ್ಲೇ, ಶವಗಳ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜನವರಿ 2025 ರ ಪ್ರಕರಣವೊಂದರಲ್ಲಿ, ಕ್ರಿಶ್ಚಿಯನ್ ಪಾಸ್ಟರ್ನ ಮಗ ರಮೇಶ್ ಬಘೇಲ್ ಅವರು ತಮ್ಮ ತಂದೆಯ ಶವವನ್ನು ತಮ್ಮದೇ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲು ಕೋರಿ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ವಿಭಿನ್ನ ನಿಲುವುಗಳನ್ನು ತಾಳಿತು. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಅಂತ್ಯಸಂಸ್ಕಾರವನ್ನು ತಡೆಯುತ್ತಿರುವುದಕ್ಕಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರ ಸ್ವಂತ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಿದರು. ಆದಾಗ್ಯೂ, ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರ ನಿಲುವು ಕಾನೂನು ನಿಯಮಗಳು ಇದಕ್ಕೆ ಅವಕಾಶ ನೀಡಿಲ್ಲ ಎಂಬುದಾಗಿತ್ತು. ಕರ್ಕಾಪಾಲ್ನಲ್ಲಿ ಮೂರು-ನಾಲ್ಕು ಗ್ರಾಮಗಳಿಗೆ ಗೊತ್ತುಪಡಿಸಿದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಬೇಕು ಎಂಬುದು ಆದೇಶವಾಗಿತ್ತು. ನಂತರ ಬಿಗಿ ಭದ್ರತೆಯ ನಡುವೆ ಕರ್ಕಾಪಾಲ್ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಶಾಂತಿಯುತವಾಗಿ ವಾಸಿಸುವ ಗ್ರಾಮಗಳಿಗೆ ಭೇಟಿ ನೀಡಿ ಇಂತಹ ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಕೆಲವು ಬಲಪಂಥೀಯ ಕಾರ್ಯಕರ್ತರು ಬುಡಕಟ್ಟು ಜನಾಂಗದವರು ಮತ್ತು ಬುಡಕಟ್ಟು ಕ್ರಿಶ್ಚಿಯನ್ರನ್ನು ಕೆರಳಿಸುತ್ತಿದ್ದಾರೆ ಎಂದು ನುಕೇಶ್ ಆರೋಪಿಸಿದ್ದಾರೆ. ಛತ್ತೀಸ್ಗಢ ಜಸ್ಟೀಸ್ ಅಂಡ್ ಈಕ್ವಾಲಿಟಿ ಅಸೋಸಿಯೇಷನ್ ಸಂಚಾಲಕ ವಕೀಲ ಪ್ರಸಾದ್ ಚೌಹಾಣ್ ಅವರು ಈ ಘಟನೆಗಳನ್ನು ದಾಖಲಿಸಲಾಗುತ್ತಿದ್ದು, ಈ ವಿಷಯದ ಕುರಿತು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಸುಕ್ಮಾ ಜಿಲ್ಲಾ ಪಂಚಾಯತ್ ಸಿಇಒ ಮುಕುಂದ್ ಠಾಕೂರ್ ಅವರು, ಪುನ್ಪಲ್ಲಿ ಗ್ರಾಮ ಸಭೆಯ ನಿರ್ಣಯವು ಸಭೆಯ ಕಾರ್ಯಸೂಚಿಯಲ್ಲಿರಲಿಲ್ಲ ಎಂದು ಹೇಳಿದರು. ಲಿಖಿತ ದೂರು ಸ್ವೀಕರಿಸಿದರೆ, ವಿಷಯದ ಕಾನೂನುಬದ್ಧತೆಯನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.












