ಯುವತಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: 7 ತಿಂಗಳಲ್ಲಿ 7 ಬಾರಿ ಮಾರಾಟ, ಶೋಷಣೆ; ಸಾವಿನ ‌ನಂತರ ಬಹಿರಂಗವಾಯ್ತು ಸತ್ಯಸಂಗತಿ

0
714

ಸನ್ಮಾರ್ಗ ವಾರ್ತೆ

ಭೋಪಾಲ: ಛತ್ತೀಸ್ಗಡದಲ್ಲಿ 18 ವರ್ಷದ ಯುವತಿಯನ್ನು ಏಳು ತಿಂಗಳಲ್ಲಿ ಏಳು ಬಾರಿ ಮಾರಾಟ ಮಾಡಿ ನಿರಂತರ ಶೋಷಣೆಗೆ ಗುರಿಪಡಿಸಿದ ಘಟನೆಯು ತಡವಾಗಿ ಬಹಿರಂಗವಾಗಿದೆ.

ಕಳೆದ ವರ್ಷ ಸೆಪ್ಟಂಬರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತೀಸ್ಗಡ ರಾಜ್ಯಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಛತ್ತೀಸ್ಗಡದ ಜಶ್‍ಪುರ ನಿವಾಸಿ ಆಗಿರುವ ಯುವತಿಯ ತಂದೆ ಕೃಷಿ ಕಾರ್ಮಿಕರಾಗಿದ್ದಾರೆ. ತಂದೆಗೆ ಕೆಲಸದಲ್ಲಿ ಯುವತಿ ಸಹಾಯ ಮಾಡುತ್ತಿದ್ದಳು. ಯುವತಿಗೆ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಸಂಬಂಧಿಕರೊಬ್ಬರು ಮಧ್ಯಪ್ರದೇಶದ ಚತ್ತಾರ್‍ಪುರಕ್ಕೆ ಕರೆದು ಕೊಂಡು ಹೋಗಿದ್ದರು.

ಅಲ್ಲಿ ಯುವತಿಯನ್ನು ಒಂದು ತಂಡ ಅಪಹರಿಸಿಕೊಂಡು ಹೋಗಿತ್ತು. ಯುವತಿಯನ್ನು ಬಿಟ್ಟು ಬಿಡಬೇಕಾದರೆ ಹಣ ಕೊಡಬೇಕೆಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಯುವತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು. ಇದರೊಂದಿಗೆ ಅಪಹರಣಕಾರರು ಯುವತಿಯನ್ನು 20,000 ರೂಪಾಯಿಗೆ ಚತ್ತಾರ್‍ಪುರ್ ಸ್ದೇಶಿ ಕಲ್ಲು ನಾಯ್ಕ್ ಎಂಬವನಿಗೆ ಮಾರಿದರು. ಈತ ಯುವತಿಯನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿದ. ಕೊನೆಯದಾಗಿ ಯುವತಿಯನ್ನು 70,000 ರೂಪಾಯಿಗೆ ಉತ್ತರಪ್ರದೇಶದ ಸಂತೋಷ್ ಕುಶ್ವಾಹ ಎಂಬಾತ ಖರೀದಿಸಿದ್ದ.

ಇಲ್ಲಿ ಸಂತೋಷನ ಮಗ ಬಬ್ಲು ಕುಶ್‍ವಾಹನೊಂದಿಗೆ ಬಲವಂತದಿಂದ ಮದುವೆ ಮಾಡಿಸಿದ್ದರು. ಬಬ್ಲು ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದ.

ನಿರಂತರ ಶೋಷಣೆಗೆ ಗುರಿಯಾಗಿ ಕಳೆದ ವರ್ಷ ಸೆಪ್ಟಂಬರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಬ್ಲುವನ್ನು ಬಂಧಿಸಲು ಪೊಲೀಸರಿಗೆ ಆಗಿಲ್ಲ. ಯುವತಿಯ ತಂದೆಯಿಂದ ದೂರದ ಸಂಬಂಧಿಕರು ಹಣಕೊಟ್ಟು ಖರೀದಿಸಿರುವುದು ನಂತರ ಪೊಲೀಸರಿಗೆ ಗೊತ್ತಾಯಿತು. ನಂತರ ಸಂಬಂಧಿಕ ಪಂಚಂ ಸಿಂಗ್ ರಾಯ್ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದರು.

ಈ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇಂತಹ ಮೋಸದ ಜಾಲಕ್ಕೆ ಬಿದ್ದಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.