ಸನ್ಮಾರ್ಗ ವಾರ್ತೆ
ದೂರದರ್ಶನ ಚಾನೆಲ್ ನಲ್ಲಿ ಸಂದರ್ಶನಕಾರನಾಗಿ ಬಿಜೆಪಿ ಐ ಟಿ ಸೆಲ್ ನ ಮುಖ್ಯಸ್ಥ ಪ್ರತ್ಯಕ್ಷಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಬಿಜೆಪಿ ಮೀಡಿಯಾ ಸೆಲ್ ನ ಅಧ್ಯಕ್ಷರಾಗಿರುವ ನವನಾಥ್ ಬ್ಯಾನ್ ಎಂಬವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಂದರ್ಶನವನ್ನು ನಡೆಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ 2024 ಡಿಸೆಂಬರ್ ಆರರಂದು ದೂರದರ್ಶನ ಈ ಸಂದರ್ಶನವನ್ನು ಪ್ರಸಾರ ಮಾಡಿದೆ.
ಟ್ಯಾಲೆಂಟ್ ಆರ್ಟಿಸ್ಟ್ ಬುಕಿಂಗ್ ಸಿಸ್ಟಮ್ ನ ಮೂಲಕ ಮುಖ್ಯಮಂತ್ರಿ ಫಡ್ನ ವೀಸ್ ಅವರ ಸಂದರ್ಶನ ನಡೆಸುವುದಕ್ಕೆ ನವನಾಥನನ್ನು ಆಯ್ಕೆ ಮಾಡಿದ್ದೇವೆ ಮತ್ತು ಅದಕ್ಕೆ ಬೇಕಾದ ಮಜೂರಿಯನ್ನು ನೀಡಿದ್ದೇವೆ ಎಂದು ದೂರದರ್ಶನ ಸಮರ್ಥಿಸಿದೆ.
ಪ್ರತಿಭಾನ್ವಿತ ಆರ್ಟಿಸ್ಟ್ ಗಳನ್ನು ಆಯ್ಕೆ ಮಾಡುವುದಕ್ಕಾಗಿ ದೂರದರ್ಶನದಲ್ಲಿ ಟ್ಯಾಲೆಂಟ್ ಆರ್ಟಿಸ್ಟ್ ಬುಕಿಂಗ್ ಎಂಬ ಸಿಸ್ಟಮ್ ಇದೆ. ಈ ವ್ಯವಸ್ಥೆಯ ಆಧಾರದಲ್ಲಿಯೇ ನವನಾಥ್ ಬ್ಯಾನ್ ಅವರನ್ನು ಫಡ್ನವಿಸ್ ಅವರ ಸಂದರ್ಶನ ಕಾರನಾಗಿ ಆಯ್ಕೆ ಮಾಡಲಾಗಿದೆ ಎಂದು ದೂರದರ್ಶನ ಹೇಳಿದೆ.
ಇದೇ ವೇಳೆ ಈ ಪ್ರಕರಣವನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ದೂರದರ್ಶನ ಸಿಕ್ಕಿ ಬೀಳಬಹುದು ಎಂದು ಪ್ರಸಾರ ಭಾರತಿಯ ಮಾಜಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಜವಾಹರ್ ಸಿರ್ಕಾರ್ ಹೇಳಿದ್ದಾರೆ.
ದೂರದರ್ಶನದ ಮಾನ ಕಳೆದು ಹೋಗಿದೆ. ಈ ಸಂದರ್ಶನದಲ್ಲಿ ಇಬ್ಬರು ಒಂದೇ ಪಕ್ಷದವರಾಗಿದ್ದಾರೆ. ಬಿಜೆಪಿಯ ರಾಜಕೀಯ ಅಜೆಂಡಾವನ್ನು ಜಾರಿಗೊಳಿಸುವ ಒಂದು ಸಂಸ್ಥೆಯಾಗಿ ದೂರದರ್ಶನ ಮಾರ್ಪಟ್ಟಿದೆ. ನಾಳೆ ಉದ್ಧವ್ ಠಾಕ್ರೆ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಇದೇ ರೀತಿಯ ಸಂದರ್ಶನವನ್ನು ದೂರದರ್ಶನ ನಡೆಸಬಹುದೇ/ ಉದ್ದವ್ ಠಾಕ್ರೆ ಅವರ ಸಂದರ್ಶನ ನಡೆಸುವುದಕ್ಕೆ ಶಿವಸೇನೆಯ ಮುಖವಾಣಿ ಪತ್ರಿಕೆಯಾದ ಸಾಮ್ನಾದ ಸಂಪಾದಕರನ್ನು ದೂರದರ್ಶನ ಕರೆಸಬಹುದೇ ಎಂದವರು ಪ್ರಶ್ನಿಸಿದ್ದಾರೆ.












