ಬೈಬಲನ್ನು ತಪ್ಪಾಗಿ ಉಲ್ಲೇಖಿಸಿದ ಆರೆಸ್ಸೆಸ್ ಮುಖಂಡ ಭಾಗವತ್: ಕ್ರೈಸ್ತ ಸಂಘಟನೆಗಳಿಂದ ಖಂಡನೆ

0
821

ಸನ್ಮಾರ್ಗ ವಾರ್ತೆ-

ದೆಹಲಿ; ಸೆ. 11- “ಮಾಬ್ ಲಿಂಚಿಂಗ್” ಎಂಬ ಪದವನ್ನು ಸಮರ್ಥಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೈಬಲ್ ಅನ್ನು ಉಲ್ಲೇಖಿಸಿರವುದನ್ನು ಭಾರತದ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚುಗಳು ಖಂಡಿಸಿವೆ.

ಭಾಗವತ್ ಅವರು ಬೈಬಲ್ ಅನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಹೇಳಿರುವ ಎನ್‌ಸಿಸಿಐ, ಸಮುದಾಯಗಳನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸುವ ಸಾಮರ್ಥ್ಯವಿರುವ ಇಂತಹ ಹೇಳಿಕೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವುದು ನಮಗೆ ಆಘಾತ ತಂದಿದೆ ಎಂದಿದೆ.

ಈ ತಪ್ಪು ನಿರೂಪಣೆಯು ಜನರಲ್ಲಿ ಅನುಮಾನವನ್ನು ಉಂಟುಮಾಡಿದೆ ಮತ್ತು “ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಅವಮಾನಿಸಿದೆ” ಎಂದು ಎನ್‌ಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಜಕೀಯ ಉದ್ದೇಶಗಳೊಂದಿಗೆ ಆಗಾಗ್ಗೆ ನಡೆಯುವ ಇಂತಹ ತಪ್ಪು ನಿರೂಪಣೆ ಅಥವಾ ತಪ್ಪು ವ್ಯಾಖ್ಯಾನಕ್ಕೆ ಜನರು ಬಲಿಯಾಗಬಾರದು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 8ರ ಮಂಗಳವಾರದಂಡು ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ದಸರಾ ಸಂಭ್ರಮಾಚರಣೆಯಲ್ಲಿ ಭಾಗವತ್ ಅವರು ಲಿಂಚಿಂಗ್ ಪರಿಕಲ್ಪನೆಯು “ಭಾರತ್‌ಕ್ಕೆ ಅನ್ಯ” ಮತ್ತು ಇದನ್ನು ದೇಶ ಮತ್ತು ಇಡೀ ಹಿಂದೂ ಸಮಾಜವನ್ನು” ದೂಷಿಸಲು ಬಳಸಲಾಗುತ್ತಿದೆ ಎಂದು ಹೇಳಿದ್ದರು.

ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಆರ್ಥಿಕವಾಗಿ ಬಡವರು ಮತ್ತು ಮಹಿಳೆಯರು ಸೇರಿದಂತೆ ಭಾರತದ ದುರ್ಬಲ ಸಮುದಾಯಗಳನ್ನು ಬಹುತೇಕ ಎಲ್ಲಾ ಲಿಂಚಿಂಗ್ ಗಳೂ ಗುರಿಯಾಗಿಸಿವೆ. ಆದ್ದರಿಂದ, ಈ ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಇಂತಹ ಘೋರ ಕೃತ್ಯಗಳನ್ನು ಮತ್ತು ಬೇಜವಾಬ್ದಾರಿಯುತ ಸಾರ್ವಜನಿಕ ಹೇಳಿಕೆಗಳನ್ನು ಖಂಡಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಬೇಕೆಂದು ಅದು ವಿನಂತಿಸಿದೆ.