ಸನ್ಮಾರ್ಗ ವಾರ್ತೆ
ಜಿದ್ದ, ಫೆ. 10: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನ ವಿರೋಧಿ ಮತ್ತು ಮನುಷ್ಯತ್ವ ವಿರೋಧಿ ಎಂದು ಕೇರಳದ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಕಮಾಲ್ ಪಾಷ ಹೇಳಿದರು. ಪೌರತ್ವ ಕಾನೂನು ಮುಸ್ಲಿಮರನ್ನು ಮಾತ್ರ ಬಾಧಿಸುವ ವಿಷಯವಲ್ಲ. ಭಾರತದ ಎಲ್ಲ ಸಮುದಾಯಗಳನ್ನು ಬಾಧಿಸುವ ಕಾನೂನು ಆಗಿದೆ. ಜಿದ್ದ ಒಐಸಿಸಿ ಮಲಪ್ಪುರಂ ಜಿಲ್ಲಾ ಕಮಿಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಮತ್ತು ಭಾರತ ಸಂವಿಧಾನ ಎಂಬ ವಿಷಯದಲ್ಲಿ ಅವರು ಮಾತಾಡುತ್ತಿದ್ದರು. ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ ಒಳಗೊಂಡ ಭಾರತ ಸಂವಿಧಾನದ ಹೃದಯ ಅದರ ಪೀಠಿಕೆಯಾಗಿದೆ. 1955ರಲ್ಲಿ ಭಾರತ ಪೌರತ್ವ ಕಾನೂನು ಅಸ್ತಿತ್ವಕ್ಕೆ ಬಂದಿತ್ತು. ಭಾರತದ ಸಂವಿಧಾನ ಪ್ರಕಾರ ಧರ್ಮ ನೋಡಿ ಪೌರತ್ವ ನೀಡಲಾಗದು. ಭಾರತ ಒಂದು ಜಾತ್ಯತೀತ ದೇಶವಾಗಿದೆ. ಧರ್ಮ ನೋಡಿ ಪೌರತ್ವ ಕೊಡುವ ಹೊಸ ಕಾನೂನು ಸಂವಿಧಾನದ ಆರ್ಟಿಕಲ್ 13 ಪ್ರಕಾರ ಅಸಿಂಧುವಾಗಿದೆ ಎಂದು ಅವರು ವಿವರಿಸಿದರು.
ವಿದೇಶದಲ್ಲಿರುವ ಅಲ್ಪಸಂಖ್ಯಾತರ ಪರ ಅನುಕಂಪ ಹೊಂದಿದ ಕೇಂದ್ರ ಸರಕಾರ ಭಾರತದ ಅಲ್ಪಸಂಖ್ಯಾತರ ವಿಷಯದಲ್ಲಿ ಯಾವುದೇ ಗಮನವಿಲ್ಲ. ಮೋದಿ ಸರಕಾರ ತಂದ ನೋಟು ನಿಷೇಧ ಭಾರತದ ಅರ್ಥ ವ್ಯವಸ್ಥೆಯನ್ನು ನಾಶಪಡಿಸಿತು. ಹಲವಾರು ಮಂದಿ ಅದರಿಂದ ಜೀವಕಳಕೊಂಡರು. ಇದರ ವಿರುದ್ದ ಜನರು ತೀವ್ರ ಪ್ರತಿಭಟನೆ ನಡೆಸಬೇಕಿತ್ತು. ಆದರೆ ,ನಾಶಗೊಂಡ ಅರ್ಥವ್ಯವಸ್ಥೆಯಿಂದ ಜನರ ಗಮನ ಬೇರೆ ಕಡೆಗೆ ತಿರುಗಿಸಲು ಪೌರತ್ವ ಕಾನೂನು ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ಮಾತಾಡುವ ಶಕ್ತಿ ಕಳಕೊಂಡರೆ ಸರ್ವಾಧಿಕಾರಕ್ಕೆ ದೇಶ ಹೊರಳಬಹುದು. ಮುಸ್ಲಿಂ ಮಹಿಳೆಯರು ಪ್ರತಿಭಟನೆ ಮಾಡಬಾರದೆನ್ನುವ ವಿದ್ವಾಂಸರ ನಿಲುವುಗಳು ಸರಿಯಲ್ಲ ಎಂದು ಕಮಾಲ್ ಪಾಶ ಹೇಳಿದರು. ಜಿದ್ದ ನ್ಯಾಶನಲ್ ಆಸ್ಪತ್ರೆ ಚೇರ್ಮೆನ್ ವಿಪಿ ಮುಹಮ್ಮದಲಿ ಕಾರ್ಯಕ್ರಮ ಉದ್ಘಾಟಿಸಿದರು.












