ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

0
196

ಸನ್ಮಾರ್ಗ ವಾರ್ತೆ

ಮೈಸೂರು: ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಮುಂದಾಗಿರುವ ಕೇಂದ್ರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಎನ್ ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯಾತೀತ ತತ್ವವನ್ನು ನಂಬುವುದಿಲ್ಲ ಎಂದವರು ಟೀಕಿಸಿದರು.

ಮತಾಂತರ ನಿಷೇಧ ಕಾನೂನು, ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ್ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯ ಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಕೇಂದ್ರದ ಈ ನಿಲುವನ್ನು ವಿರೋಧಿಸುತ್ತದೆ ಎಂದರು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರ್ ಟಿ ಐ ಕಾರ್ಯಕರ್ತರು ಮುಖ್ಯಮಂತ್ರಿಗಳ ವಿರುದ್ದ ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದರು.