ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಆಸಕ್ತಿ ವಹಿಸದ ಕರಾವಳಿಯ ಯುವಜನತೆ: ಅವಿಭಜಿತ ಜಿಲ್ಲೆಯಿಂದ 5 ವರ್ಷದಲ್ಲಿ 78 ಮಂದಿ ಮಾತ್ರ ಸೇರ್ಪಡೆ

0
845

ಮಂಗಳೂರು: ನಮ್ಮ ಕೆಲಸ ಕಾರ್ಯಗಳಿಗೆ ಪೊಲೀಸ್ ಠಾಣೆಗೆ ತೆರಳಿದಾಗ ಸಂವಹನದಲ್ಲಿ ತೊಂದರೆಯಾದಾಗ ನಮಗೆ ಥಟ್ಟನೆ ನೆನಪಾಗೋದು, “ನಮ್ಮ ಊರುದ ಪೊಲೀಸ್ ಆದಿತ್ತ್0ಡ ಬೇಲೆ ಆತು. ಆ ಪೊಲೀಸ್ ಗ್ ತುಳು ಬರ್ಪುಜ್ಜಿ ಮಾರೆ'(ನಮ್ಮ ಊರಿನ ಪೋಲೀಸ್ ಆಗಿದ್ದಿದ್ದರೆ ಕೆಲಸ ಆಗುತ್ತಿತ್ತು. ಆ ಪೊಲೀಸ್ ಗೆ ತುಳು ಬರುವುದಿಲ್ಲ) ಸಾಮಾನ್ಯ ಜನರು ಪೊಲೀಸ್ ಠಾಣೆಗೆ ಹೋದಾಗ ಇಂಥ ಗುಸುಗುಸು ಸಾಮಾನ್ಯ.

ದ ಕ ಮತ್ತು ಉಡುಪಿ ಜಿಲ್ಲೆಯು ಪೊಲೀಸ್ ಇಲಾಖೆಯನ್ನು ಅಸ್ಪೃಶ್ಯದಿಂದ ನೋಡುತ್ತಿದೆಯೇ, ಯುವ ಸಮೂಹ ಪೊಲೀಸ್ ಇಲಾಖೆಯ ಬಗ್ಗೆ ಅಲರ್ಜಿ ಭಾವನೆಯನ್ನು ಹೊಂದಿದೆಯೇ ಎಂಬ ಪ್ರಶ್ನೆಯನ್ನು ಪೊಲೀಸ್ ಇಲಾಖೆಯ ಅಂಕಿ ಅಂಶಗಳು ಎತ್ತುತ್ತಿವೆ. ಈ ಅವಿಭಜಿತ ಜಿಲ್ಲೆಯಲ್ಲಿ ವಿದ್ಯಾವಂತರು ಹೆಚ್ಚಿದ್ದೂ ಪೊಲೀಸ್ ಇಲಾಖೆ ಸೇರ್ಪಡೆಯಲ್ಲಿ ಇಲ್ಲಿನವರ ಪಾಲು ತೀರಾ ಕಮ್ಮಿಯೇಕೆ ಅನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ.

ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಕರಾವಳಿಯ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕಳೆದ 5 ವರ್ಷಗಳಲ್ಲಿ ಉಭಯ ಜಿಲ್ಲೆಯಲ್ಲಿ ಒಟ್ಟು ಸೇರ್ಪಡೆಯಾದ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ 1769. ಅದರಲ್ಲಿ ಕೇವಲ 78 ಮಂದಿ ಮಾತ್ರ ಕರಾವಳಿಯವರು ಎಂಬುದು ಅಚ್ಚರಿಯ ವಿಷಯ.

ಮಂಗಳೂರು ಪೊಲೀಸ್ ಕಮಿಷನರೇಟ್ ರಚನೆಯಾಗಿ 10 ವರ್ಷಗಳಾಗಿದ್ದರೂ, 2011 ರಿಂದ ಒಟ್ಟು 1178 ಮಂದಿ ಇಲಾಖೆಗೆ ಸೇರ್ಪಡೆಯಾಗಿದ್ದಾರೆ. ಇದರಲ್ಲಿ ಅವಿಭಜಿತ ದ.ಕ. ಜಿಲ್ಲೆಯವರು ಕೇವಲ 15 ಮಂದಿ ಮಾತ್ರ.

ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಹೊಸತರಲ್ಲಿ ದ.ಕ. ಜಿಲ್ಲೆ, ಉಡುಪಿಗೆ ಬರುವ ಕರ್ನಾಟಕದ ಇತರೆ ಭಾಗದ ಮಂದಿ, ಎರಡು ಮೂರು ವರ್ಷಗಳವರೆಗೆ ಸೇವೆ ಸಲ್ಲಿಸಿ ಹಲವು ಸಮಸ್ಯೆಗಳನ್ನು ಉಲ್ಲೇಖಿಸಿ ಕೊನೆಗೆ ಲಾಬಿ ನಡೆಸಿ ತಮ್ಮ ಊರು, ಜಿಲ್ಲೆಗಳಿಗೆ ವರ್ಗಾವಣೆ ಪಡೆದುಕೊಳ್ಳುತ್ತಾರೆ. ವರ್ಗಾವಣೆಯಾಗಿ, ಖಾಲಿಯಾದ ಹುದ್ದೆಯು ಪೂರ್ತಿಯಾಗುವುದೇ ಇಲ್ಲ ಎಂದು ಮಾಧ್ಯಮಗಳು ವರದಿಗಳು ಹೇಳುತ್ತಿವೆ. ಆದರೂ ಭರ್ತಿಯಾಗೋದು ಕಡಿಮೆ.

ಭಾಷಾ ಸಂವಹನದ ಸಮಸ್ಯೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆಡಳಿತ ಭಾಷೆಯು ಕನ್ನಡವಾಗಿದ್ದರೂ ಸಹ, ತುಳು, ಬ್ಯಾರಿ, ಕೊಂಕಣಿ, ಉರ್ದು, ನವಾಯಿತಿ ಯಂತಹ ಭಾಷೆಗಳಲ್ಲಿ ವ್ಯವಹಾರ ಮಾಡುವವರು ಹೆಚ್ಚು. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಯನ್ನು ‘ಬಹುಭಾಷಾ ಪ್ರದೇಶ’ವಾಗಿಯೂ ಗುರುತಿಸಲಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗುವ ಹೊರ ಜಿಲ್ಲೆಯವರಿಗೆ ಭಾಷಾ ಸಂವಹನದ ಸಮಸ್ಯೆಯು ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಸೇವೆ ನೀಡುವಲ್ಲಿಯೂ ನ್ಯೂನತೆ ಕಂಡು ಬರುತ್ತಿದೆ. ಸ್ಥಳೀಯರು ತಮ್ಮ ಮಾತೃಭಾಷೆಯಲ್ಲೇ ಹೆಚ್ಚು ಸಂವಹನ ನಡೆಸುವುದರಿಂದ ಹೊರಗಿನ ಜಿಲ್ಲೆಯ ಪೊಲೀಸರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಇದನ್ನು ಈ ಹಿಂದೆ ಮನಗಂಡು, ಆ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಚಂದ್ರಶೇಖರ್ ರವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಕಾರದೊಂದಿಗೆ ಮಂಗಳೂರು ಸಿಟಿ ಕಮಿಷನರ್ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಯ 35 ಸಿಬ್ಬಂದಿಗಳಿಗೆ ಬ್ಯಾರಿ, ತುಳು ಭಾಷೆಯ ಎರಡು ವಾರಗಳ ಭಾಷಾ ತರಬೇತಿ ಶಿಬಿರವನ್ನು ನಡೆಸಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ಕೊಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.

ಜನರ ಸೇವೆ ಮಾಡಲು ಪೊಲೀಸ್ ಇಲಾಖೆಯು ಒಂದು ಉತ್ತಮ ಅವಕಾಶ. ಒಳ್ಳೆಯ ಮನಸ್ಸು ಮಾಡಿದಲ್ಲಿ ಸ್ಥಳೀಯ ಯುವಕರು ಇಲಾಖೆಗೆ ಸೇರಬಹುದು. ಯುವಕರಿಗಾಗಿ ಕಾರ್ಯಾಗಾರ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಎಸ್ ಪಿ, ಸ್ಥಳೀಯ ಯುವಕರು ಆಸಕ್ತಿ ವಹಿಸಿ ಪೊಲೀಸ್ ಇಲಾಖೆಗೆ ಸೇರಬೇಕು. ಭಾಷೆಯ ಸಮಸ್ಯೆಯಿಂದ ಹೊರಜಿಲ್ಲೆಯವರು ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಇಲಾಖೆಗೆ ಸೇರ್ಪಡೆಯಾಗಲು ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡಲಿದೆ ಎಂದಿದ್ದಾರೆ.

ವೇತನ ಸಮಸ್ಯೆ:

ಕೆಲವೊಮ್ಮೆ ಪೊಲೀಸ್ ಇಲಾಖೆಯನ್ನು ಸರಕಾರ ಕೂಡಾ ಕಡೆಗಣಿಸುತ್ತಿರುವುದರಿಂದ ವೇತನ ಸಮಸ್ಯೆ ಕೂಡಾ ಒಂದು. ಸಾರ್ವಜನಿಕರಿಗಾಗಿ ಹಗಲು ರಾತ್ರಿ ಸೇವೆ ಮಾಡುವ ಪೊಲೀಸರಿಗೆ ಇರುವ ವೇತನ ಹಾಗೂ ಅದೇ ರೀತಿ ಬೇರೆ ಸರಕಾರಿ ಇಲಾಖೆಯಲ್ಲಿ ಇರುವವರಿಗೆ ಇರುವ ವೇತನಕ್ಕಿಂತ ಕಡಿಮೆ ಇರುವುದು ಕಂಡುಬರುತ್ತದೆ.

ಈಗಾಗಲೇ ಪೊಲೀಸರ ವೇತನ ತಾರತಮ್ಯ ನಿವಾರಣೆಗೆ ರಚಿಸಿದ್ದ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಜಾರಿಗೆ ಸರಕಾರ ಒಪ್ಪಿಗೆ ಸೂಚಿಸಿದ್ದರೂ, ಕಾನ್ ಸ್ಟೇಬಲ್ ಹೊರತು ಪಡಿಸಿ, ಉಳಿದ ಹಂತದ ಸಿಬ್ಬಂದಿಗೆ ಇದರಿಂದ ಲಾಭವಿಲ್ಲ ಎಂಬ ಅಪಸ್ವರವೂ ಕೂಡ ವ್ಯಕ್ತವಾಗಿದೆ.ವೇತನ ಹೆಚ್ಚಳವು ಪೊಲೀಸರ ಬಹುದಿನಗಳ ಕನಸಾಗಿದ್ದರೂ, ಸಂಪೂರ್ಣ ನನಸಾಗುವ ಬಗ್ಗೆ ಅನುಮಾನ ಇದೆ.

ವೇತನದ ಸಮಸ್ಯೆಯಿಂದ ಕೂಡ ಪೊಲೀಸ್ ಇಲಾಖೆಯ ಬಗ್ಗೆ ಯುವಕರಿಗೆ ಆಸಕ್ತಿ ಕಡಿಮೆ ಇದೆ ಎಂಬುದು ಕೂಡ ಗಮನಾರ್ಹ ಸಂಗತಿ.