ವಕ್ಫ್ ಮಸೂದೆಯ ಕುರಿತು ಅಭಿಪ್ರಾಯ ಸಂಗ್ರಹಿಸಲು ಸೆ. 18 ರಿಂದ ಮೂರು ದಿನಗಳ ಜಂಟಿ ಸಂಸದೀಯ ಸಮಿತಿ ಸಭೆ

0
247

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ ಸಭೆ ಸಂಸತ್ ಭವನದ ಸಂಕೀರ್ಣದಲ್ಲಿ ಸೆಪ್ಟೆಂಬರ್ 18, 19 ಹಾಗೂ 20ರಂದು ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 18ರಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಮ್ಮ ಮೌಖಿಕ ಪುರಾವೆಗಳನ್ನು ಸಮಿತಿಯ ಮುಂದೆ ಪ್ರಸ್ತುತಪಡಿಸಲಿದ್ದಾರೆ. ಮರು ದಿನ ಜಂಟಿ ಸಂಸದೀಯ ಸಮಿತಿ ಪಾಟ್ನಾದ ಚಾಣಕ್ಯ ಕೇಂದ್ರೀಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಫೈಝನ್ ಮುಸ್ತಾಫಾ, ಪಶಮಂಡ ಮುಸ್ಲಿಂ ಮಹಾಝ್ ಹಾಗೂ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸೇರಿದಂತೆ ಕೆಲವು ತಜ್ಞರು ಹಾಗೂ ಸಂಬಂಧಿಸಿದವರ ಅಭಿಪ್ರಾಯಗಳು ಅಥವಾ ಶಿಫಾರಸುಗಳನ್ನು ಆಲಿಸಲಿದೆ.

ಸೆಪ್ಟೆಂಬರ್ 20ರಂದು ಮಸೂದೆ ಕುರಿತು ಅಜೀರ್‌ನ ಆಲ್‌ ಇಂಡಿಯಾ ಸಜ್ಜಾದಾನಾಸಿನ್ ಕೌನ್ಸಿಲ್, ದಿಲ್ಲಿಯ ಮುಸ್ಲಿಂ ರಾಷ್ಟ್ರೀಯ ಮಂಚ್, ದಿಲ್ಲಿಯ ಭಾರತ್ ಫಸ್ಟ್‌ನಿಂದ ಅಭಿಪ್ರಾಯ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಕ್ಫ್ ಮಂಡಳಿಯ ಕಾರ್ಯಗಳನ್ನು ಸುಗಮಗೊಳಿಸುವ ಹಾಗೂ ವಕ್ಫ್ ಸೊತ್ತಿನ ಸಮರ್ಥ ನಿರ್ವಹಣೆಯನ್ನು ಖಾತರಿಗೊಳಿಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರ ಲೋಕಸಭೆಯಲ್ಲಿ ಆಗಸ್ಟ್ 8ರಂದು 2 ಮಸೂದೆಗಳಾದ ವಕ್ಫ್ (ತಿದ್ದುಪಡಿ) ಮಸೂದೆ, 2024 ಹಾಗೂ ಮುಸಲ್ಮಾನ್ ವಕ್ಫ್ (ರದ್ದುಗೊಳಿಸುವ)ಮಸೂದೆ, 2024 ಅನ್ನು ಮಂಡಿಸಿತ್ತು. ಜಂಟಿ ಸಂಸದೀಯ ಸಮಿತಿಯನ್ನು ರೂಪಿಸಿದ ಬಳಿಕ ಈ ಮಸೂದೆಯನ್ನು ಪರಿಶೀಲಿಸಲು ಸೆಪ್ಟೆಂಬ‌ರ್ 6ರಂದು ನಾಲ್ಕನೇ ಸಭೆ ನಡೆಸಲಾಗಿತ್ತು.

ನಾಲ್ಕನೇ ಸಭೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಜಂಟಿ ಸಂಸದೀಯ ಸಮಿತಿ ಮುಂದೆ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದ್ದರು. ಅಲ್ಲದೆ, ಝಕಾತ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ತೆಲಂಗಾಣ ವಕ್ಫ್ ಬೋರ್ಡ್ ಸೇರಿದಂತೆ ಇತರ ಹಲವು ಸಂಬಂಧಪಟ್ಟವರು ಕೂಡ ತಮ್ಮ ನಿಲುವು, ಸಲಹೆ ಹಾಗೂ ಮೌಖಿಕ ಪುರಾವೆಗಳನ್ನು ಹಂಚಿಕೊಂಡಿದ್ದರು.

ವಕ್ಫ್ ಸೊತ್ತುಗಳನ್ನು ನಿರ್ವಹಿಸುವ ಹಾಗೂ ನಿಯಂತ್ರಿಸುವಲ್ಲಿನ ಸಮಸ್ಯೆ ಹಾಗೂ ಸವಾಲುಗಳನ್ನು ಪರಿಹರಿಸುವುದು ವಕ್ಫ್ ಕಾಯ್ದೆ 1995ರ ತಿದ್ದುಪಡಿಯ ಉದ್ದೇಶವಾಗಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯ ಶುಕ್ರವಾರ ನೀಡಿದ ಹೇಳಿಕೆ ತಿಳಿಸಿದೆ.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮಸೂದೆ ಕುರಿತ ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಮುಂದಿನ ಸಂಸತ್ ಅಧಿವೇಶನದಲ್ಲಿ ಬೆಂಬಲಿಸದಿರಲು ನಿರ್ಧರಿಸಿವೆ. ಪ್ರತಿಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲಾಗಿದೆ. ಸಮಿತಿ ತನ್ನ ವರದಿಯನ್ನು ಮುಂದಿನ ಅಧಿವೇಶನದ ಸಂದರ್ಭ ಲೋಕಸಭೆಯ ಸ್ಪೀಕರ್‌ ಅವರಿಗೆ ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.