ಹಿಟ್ಲರ್ ಯಹೂದಿಯರನ್ನು ಗುರಿಯಾಗಿಸಿದಂತೆ ಆರ್.ಎಸ್.ಎಸ್ ಮುಸ್ಲಿಮರನ್ನು ಗುರಿಯಾಗಿಸಿದೆ: ದಿಗ್ವಿಜಯ ಸಿಂಗ್

0
185

ಸನ್ಮಾರ್ಗ ವಾರ್ತೆ

ಜರ್ಮನಿಯಲ್ಲಿ ಹಿಟ್ಲರ್ ಹೇಗೆ ಯಹೂದಿಯರನ್ನು ಬೇಟೆಯಾಡಿದನೋ ಅದೇ ರೀತಿಯಲ್ಲಿ ಭಾರತದಲ್ಲಿ ಮುಸ್ಲಿಮರನ್ನು ಆರ್ ಎಸ್ ಎಸ್ ಗುರಿ ಇಟ್ಟುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಜೈಲಲ್ಲಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್ ಎಸ್ ಎಸ್ ನ ನರ್ಸರಿ ಎಂದು ಕರೆಯಲಾಗುವ ಪ್ರದೇಶದಿಂದ ನಾನು ಬಂದಿದ್ದೇನೆ. ನನಗೆ ಅವರು ಚೆನ್ನಾಗಿ ಗೊತ್ತು. ಅವರಿಗೆ ಪ್ರಜಾತಂತ್ರದಲ್ಲಿಯೂ ನಂಬಿಕೆ ಇಲ್ಲ. ಸಂವಿಧಾನದಲ್ಲೂ ನಂಬಿಕೆ ಇಲ್ಲ. ಹಿಟ್ಲರ್ ಹೇಗೆ ಯಹೂದ್ಯರನ್ನು ಗುರಿಯಾಗಿಸಿಕೊಂಡಿದ್ದನೋ ಹಾಗೆಯೇ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಇಂಥದೊಂದು ಚಿಂತನೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.

ಆರ್ ಎಸ್ ಎಸ್ ನೋಂದಣಿಯಾಗದ ಒಂದು ಸಂಸ್ಥೆಯಾಗಿದೆ. ಅದಕ್ಕೆ ಸದಸ್ಯರೂ ಇಲ್ಲ ಅಕೌಂಟೂ ಇಲ್ಲ. ಇವರಲ್ಲಿ ಯಾರನ್ನಾದರೂ ಬಂಧಿಸಿದರೆ ಅವರಿಂದ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಅವರು ನಮ್ಮ ವ್ಯವಸ್ಥೆಯ ಎಲ್ಲಾ ಮೂಲೆ ಮೂಲೆಗೂ ತಲುಪಿದ್ದಾರೆ. ಈ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ನಡೆಯಬೇಕು ಎಂದು ಸಿಂಗ್ ಹೇಳಿದ್ದಾರೆ.

ಉಮರ್ ಖಾಲಿದ್ ಸಹಿತ ಎಲ್ಲಾ ಆಕ್ಟಿವಿಷ್ಟುಗಳನ್ನು ಬಿಡುಗಡೆಗೊಳಿಸಬೇಕು ಎಂದು ಹೋರಾಡುತ್ತಿರುವುದು ಮುಸ್ಲಿಮರು ಮಾತ್ರ. ಆದ್ದರಿಂದಲೇ ಅವರಿಗೆ ಜಾಮೀನು ಸಿಗುತ್ತಿಲ್ಲ. ಜಾಮೀನು ಕೊಡಬೇಕು ಜೈಲು ಪರಿಹಾರವಲ್ಲ ಎಂಬುದಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಮುಸ್ಲಿಮರಿಗೆ ಸಂಬಂಧಿಸಿದಂತೆ ಜೈಲು ಪರಿಹಾರ ಎಂಬ ಪರಿಸ್ಥಿತಿ ಇದೆ ಎಂದವರು ಹೇಳಿದ್ದಾರೆ.