ಸನ್ಮಾರ್ಗ ವಾರ್ತೆ
ಕುಟ್ಟಿಪ್ಪುರಂ, ಜ. 24: ಸಂಘಪರಿವಾರವು ಪೌರತ್ವ ಕಾನೂನಿನ ಮರೆಯಲ್ಲಿ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದೆ ಎಂದು ಕೇರಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಪೌರತ್ವ ಕಾನೂನನ್ನು ಬೆಂಬಲಿಸುವವರಿಗೆ ಕುಡಿಯುವ ನೀರು ನಿರಾಕರಿಸಲಾಗುತ್ತಿದೆ ಎಂದು ನಕಲಿ ಪ್ರಚಾರ ನಡೆಸಲಾಗಿದೆ ಎಂದು ಮಲಪ್ಪುರಂ ಎಸ್ಪಿಗೆ ಸುಪ್ರೀಂಕೋರ್ಟು ವಕೀಲರಾದ ಕೆ. ಶುಭಾಸ್ ಚಂದ್ರನ್ ಎಂಬವರು ದೂರು ನೀಡಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ತನ್ನ ಟ್ವಿಟರ್ ಖಾತೆಯಲ್ಲಿ ಈ ವರದಿಯನ್ನು ಪ್ರಚಾರ ಮಾಡಿದ್ದರು. ಆದ್ದರಿಂದ ಶೋಭಾರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಕುಟ್ಟಿಪುರಂ ಪಂಚಾಯತ್ನ ಹತ್ತನೇ ವಾರ್ಡಿನ ಪೈಗಂಣ್ಣೂರಿನಲ್ಲಿ ಘಟನೆ ನಡೆದಿದೆ ಎಂದು ಅಪಪ್ರಚಾರ ನಡೆಸಲಾಗಿತ್ತು.
ಜಲನಿಧಿ ಯೋಜನೆ ಮತ್ತು ಎಸ್ಸಿ ಚೆರುಕುನ್ನ್ ಕಾಲನಿಯ ಕುಡಿಯುವ ನೀರು ಯೋಜನೆ ಸ್ಥಗಿತಗೊಂಡಿದೆ. ಆದ್ದರಿಂದ ಕಾಲನಿಗೆ ಸಮೀಪದ ಖಾಸಗಿ ವ್ಯಕ್ತಿಯ ಬಾವಿಯಿಂದ ನೀರು ಒದಗಿಸಲಾಗುತ್ತಿದೆ. ಆದರೆ ಪೌರತ್ವ ಕಾನೂನು ಬೆಂಬಲಿಸಿ ವಳಂಚೇರಿಯಲ್ಲಿ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ ಕಾಲನಿಯವರಿಗೆ ಖಾಸಗಿ ವ್ಯಕ್ತಿ ನೀರು ಕೊಡುತ್ತಿಲ್ಲ ಎಂದು ಪ್ರಚಾರ ನಡೆಸಲಾಗಿತ್ತು. ಇದನ್ನು ಶೋಭಾ ತನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು.
ಈಗ ಕಾಲನಿಯವರಿಗೆ ಕುಡಿಯುವ ನೀರಿನ ಬದಲಿ ವ್ಯವಸ್ಥೆ ಮಾಡಲು ಕುಟ್ಟಿಪುರಂ ಪಂಚಾಯತ್ ಶುಕ್ರವಾರ ಸಭೆ ಸೇರಲಿದೆ.












