ಆತ್ಮವಿಶ್ವಾಸ ದೇವನು ನಮಗೆ ನೀಡಿದ ಮಹಾನ್ ಅನುಗ್ರಹ

0
643

ಸನ್ಮಾರ್ಗ ವಾರ್ತೆ

ಲೇಖನ: ಖತೀಜ ನುಸ್ರತ್

ಆತ್ಮವಿಶ್ವಾಸ ದೇವನು ನಮಗೆ ನೀಡಿದಂತಹ ಅತ್ಯುತ್ತಮ ಅನುಗ್ರಹವಾಗಿದೆ. ಅದು ಜೀವನದಲ್ಲಿ ನೈಜ ಗುರಿಯನ್ನು ತಲುಪಲು ಮತ್ತು ವಿಜಯ ಹೊಂದಲು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ. ಆತ್ಮ ವಿಶ್ವಾಸ ಎಂದರೆ ಅಲ್ಲಾಹನ ಮೇಲಿರುವ ಅಚಲ ವಿಶ್ವಾಸವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವಂತಹ ಸನ್ನಿವೇಶ ಮತ್ತು ಸಮಸ್ಯೆಗಳನ್ನು ಯಾವ ರೀತಿ ಎದುರಿಸುತ್ತೇವೆಂಬ ಮನೋಭಾವವಾಗಿದೆ. ನಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ ನಂತರ ಅಲ್ಲಾಹನ ಮೇಲೆ ಭರವಸೆಯಿಟ್ಟು ಅಲ್ಲಾಹನಿಂದ ವಿಜಯ ಮತ್ತು ಪ್ರತಿಫಲವನ್ನು ನಿರೀಕ್ಷಿಸಬೇಕು.

ಸಮಸ್ಯೆಗಳು ಮನುಷ್ಯ ಜೀವನದಲ್ಲಿ ಸಹಜವಾಗಿರುತ್ತದೆ. ಆತ್ಮವಿಶ್ವಾಸವನ್ನು ವರ್ಧಿಸಲು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವಾಗಲು ಸಮಸ್ಯೆಗಳು ನಮ್ಮನ್ನು ಸೋಲಿಸಲು ಬಿಡಬಾರದು. ಬದಲಾಗಿ ಸಮಸ್ಯೆಗಳನ್ನು ನಾವು ಸೋಲಿಸುವವರಾಗಿರಬೇಕು. ಸೋಲು, ನೋವು, ಕಷ್ಟ ಮತ್ತು ಸಮಸ್ಯೆ ಎಲ್ಲವೂ ಜೀವನದ ಭಾಗವಾಗಿದೆ. ಸಮಸ್ಯೆಗಳನ್ನು ಎದುರಿಸದವರು ಹಾಗೂ ಸಮಸ್ಯೆಗಳಿಂದ ನುಣುಚಿಕೊಳ್ಳುವವರಲ್ಲಿ ಆತ್ಮವಿಶ್ವಾಸವಿರುವುದಿಲ್ಲ. ಒಬ್ಬರಲ್ಲಿ ಯಾವುದೇ ಒಂದು ಸಮಸ್ಯೆಗಳನ್ನು ಎದುರಿಸಿದ ನಂತರ, ಆ ಸಮಸ್ಯೆ ಎದುರಿಸುವುದಕ್ಕಿಂತ ಮುಂಚೆ ಇದ್ದ ಆತ್ಮವಿಶ್ವಾಸದಲ್ಲಿ ವ್ಯತ್ಯಾಸ ಇರುವುದು. ಯಾವುದೇ ಸೋಲನ್ನು ಅನುಭವಿಸದೆ, ಸಮಸ್ಯೆಗಳನ್ನು ಎದುರಿಸದೆ ಜೀವನದಲ್ಲಿ ವಿಜಯ ಹೊಂದಲು ಸಾಧ್ಯವಿಲ್ಲ. ಸಮಸ್ಯೆಗಳು ಮಾನವನಿಗೆ ಹಲವಾರು ಪಾಠಗಳನ್ನು ಕಲಿಸಿಕೊಡುತ್ತದೆ. ಯಾವುದೇ ರೀತಿಯ ಕಷ್ಟ ಪಡದೆ ಸಿಕ್ಕಿದ ವಿಜಯಕ್ಕೆ ಯಾವುದೇ ಬೆಲೆಯೂ ಇರುವುದಿಲ್ಲ. ಯಶಸ್ಸು ಯಾವಾಗಲು ಆಕಸ್ಮಿಕವಾಗಿ ಸಂಭವಿಸುವುದಿಲ್ಲ ಬದಲಾಗಿ ಅದಕ್ಕೆ ಅತ್ಯುತ್ತಮ ಯೋಜನೆ ಹಾಗು ಪರಿಶ್ರಮದ ಅಗತ್ಯವಿರುತ್ತದೆ.

ಒಬ್ಬ ವ್ಯಕ್ತಿಗೆ ಜೀವನದಲ್ಲಿ ವಿಜಯ ಹೊಂದಲು ಸಕಾರಾತ್ಮಕ ಭಾವನೆ, ಆಲೋಚನೆ, ಚಿಂತನೆ, ಕಲ್ಪನೆಗಳು ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವನೆಗಳು ಅಗತ್ಯವಾಗಿದೆ. ಈ ಭಾವನೆಗಳು ಮನುಷ್ಯನಿಗೆ ಶಕ್ತಿ, ಧೈರ್ಯ, ಸೃಜನಶೀಲ ಚಿಂತನೆ ಮತ್ತು ಯಶಸ್ಸಿನ ಪ್ರಜ್ಞೆಯನ್ನು ಪೋಷಿಸುತ್ತದೆ. ನಕಾರಾತ್ಮಕ ಚಿಂತನೆ, ಸೋಲಿನ ಭಯ, ಸಂಶಯ, ಅನುಮಾನ, ನಿರಾಶೆ ನಮ್ಮ ಆತ್ಮ ವಿಶ್ವಾಸವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ನಾವು ಯಾವಾಗಲು ವೈಫಲ್ಯದಲ್ಲಿ ಖಿನ್ನತೆಯನ್ನು ಅನುಭವಿಸಬಾರದು ಮತ್ತು ಯಶಸ್ಸಿನಲ್ಲಿ ಅಹಂಕಾರಪಡಬಾರದು. ನಕಾರಾತ್ಮಕ ಮಾತುಗಳಿಂದ ನಮ್ಮ ಕೆಲಸಗಳನ್ನು ವಿಮರ್ಷಿಸುವವರನ್ನು, ನಮ್ಮನ್ನು ಪ್ರೋತ್ಸಾಹಿಸದವನ್ನು ಕಡೆಗಣಿಸಬೇಕು.

ಯಾವಾಗಲು ನಮ್ಮ ವಿಜಯವನ್ನು ಆಪ್ತರೊಂದಿಗೆ ಹಂಚಿಕೊಳ್ಳಬೇಕು. ನಮ್ಮ ವಿಜಯವನ್ನು ಪ್ರೋತ್ಸಾಹಿಸುವವರ ಒಂದು ಕೂಟ ನಮ್ಮೊಂದಿಗಿರಬೇಕು. ಹೊಸ ಹೊಸ ವಿಷಯಗಳನ್ನು ಕಲಿಯುವುದು, ಅಧ್ಯಯನ ಮಾಡುವುದು, ಜ್ಞಾನವನ್ನು ಹೆಚ್ಚಿಸುವುದು. ನಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬೇಕು. ನನ್ನ ಕೆಲಸ, ನನ್ನ ಮನೆ, ನನ್ನ ಹೆಂಡತಿ ನನ್ನ ಮಕ್ಕಳು ಎಂದು ಹೀಗೆ ಸೀಮಿತವಾದ ಮನಸ್ಸುಗಳಲ್ಲಿ ಜೀವಿಸುವವರಿಗೆ ಆತ್ಮವಿಶ್ವಾಸವಿರುವುದಿಲ್ಲ. ಬದಲಾಗಿ ಜನರೊಂದಿಗೆ ಬೆರೆಯುವ, ಜನರ ಕಷ್ಟಗಳಿಗೆ ಸ್ಪಂದಿಸುವಾಗ ಆತ್ಮವಿಶ್ವಾಸ ಹೆಚ್ಚುತ್ತದೆ.

ಹೊಸ ತಲೆಮಾರುಗಳಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಸಣ್ಣ ಸಣ್ಣ ಕಾರಣಗಳಿಗಾಗಿ ಆತ್ಮಹತ್ಯೆ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ. ಸಮಸ್ಯೆಗಳನ್ನು ಅರ್ಥಮಾಡದೆ, ಅವುಗಳಿಗೆ ಪರಿಹಾರ ಕಂಡುಹಿಡಿಯದೇ, ಆ ಸಮಸ್ಯೆ ಕ್ಷುಲ್ಲಕವೂ, ಕೆಲವು ದಿನಗಳ ನಂತರ ಅದು ಇಲ್ಲವಾಗುವುದೆಂಬ ಅರಿವಿಲ್ಲದೆ ತಮ್ಮ ಮೇಲಿನ ವಿಶ್ವಾಸವನ್ನೇ ಕಳೆದು ಕೊಳ್ಳುತ್ತಾರೆ. ನಮಗೆ ನಮ್ಮ ಮೇಲೆಯೇ ವಿಶ್ವಾಸವಿಲ್ಲದಿದ್ದರೆ ಇನ್ನೊಬ್ಬರ ಮೇಲೆ ವಿಶ್ವಾಸವಿರಿಸುವುದಾದರೂ ಹೇಗೆ? ನಮ್ಮ ಜೀವನದಲ್ಲಿ ಸಂತೋಷ ಅಥವಾ ದುಃಖ ಯಾವುದೂ ಶಾಶ್ವತವಲ್ಲ. ಸಂತೋಷ, ಸಂಕಷ್ಟ, ಸುಖ ದುಃಖ, ಲಾಭ ನಷ್ಟ, ಅಪಘಾತ, ರೋಗ ಹೀಗೆ ಜೀವನದಲ್ಲಿ ಎದುರಾಗುವ ಎಲ್ಲ ಸನ್ನಿವೇಶಗಳನ್ನು ಆತ್ಮವಿಶ್ವಾಸದೊಂದಿಗೆ ಎದುರಿಸಲು ತಯಾರಾಗಬೇಕು. ಕೆಲವೊಮ್ಮೆ ಕಷ್ಟ ನಷ್ಟಗಳೇ ನಮ್ಮ ವಿಜಯದ ಅಡಿಪಾಯವಾಗಿರುತ್ತದೆ. ನಾವು ಭೂಮಿಯ ಮೇಲೆ ಒಂದು ಉದ್ದೇಶ ಹಾಗೂ ಹಲವಾರು ಜವಾಬ್ದಾರಿಗಳೊಂದಿಗೆ ಬಂದವರು. ನಾವು ಇಂದು ಮಾಡುವ ಪ್ರತಿಯೊಂದು ತ್ಯಾಗವು ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯದಲ್ಲಿ ಉತ್ತಮ ಪರಿಣಾಮ ಹೊಂದಬಹುದು ಎಂಬ ದೃಢವಿಶ್ವಾಸವಿರಬೇಕು.

ಪ್ರತಿಯೊಬ್ಬರ ಪ್ರತಿಭೆ, ಸಾಮರ್ಥ್ಯ, ಗುಣ, ಸ್ವಭಾವ ಸಮಾನವಾಗಿರುದಿಲ್ಲ. ಆದರೆ, ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶಗಳಿರುತ್ತದೆ. ಉತ್ತಮ ಚಿಂತನೆ ಹಾಗೂ ಭಾವನೆಗಳಿಂದ ಪ್ರತಿ ದಿನ ನಮ್ಮ ಹೃದಯವನ್ನು ಹರ್ಷಭರಿತಗೊಳಿಸಬೇಕು. ನಮ್ಮ ಮನಸ್ಸಿನ ಭಾವನೆಗಳೇ ನಮ್ಮನ್ನು ನಿಯಂತ್ರಿಸುತ್ತದೆ. ಉತ್ತಮ ಚಿಂತನೆಗಳು ಉತ್ತಮ ಮಾತು, ನಡೆ ಕೃತಿಗಳಿಗೆ ಪ್ರೋತ್ಸಾಹಿಸುತ್ತದೆ. ನಮ್ಮಲ್ಲಿ ಇಲ್ಲದಿರುವುದನ್ನು ಇನ್ನೊಬ್ಬರೊಂದಿಗೆ ಯಾವಾಗಲೂ ಹೋಲಿಕೆ ಮಾಡಬಾರದು. ಇದು ನಿರಾಶೆ, ಕೀಳರಿಮೆ, ಅಸೂಯೆಯನ್ನುಂಟು ಮಾಡುತ್ತದೆ. ನಮ್ಮಲ್ಲಿರುವ ಸಂಪತ್ತು ಮತ್ತು ಸೌಕರ್ಯಕ್ಕನುಸಾರವಾಗಿ ನಮ್ಮ ಜೀವನವನ್ನು ಸಾಗಿಸಲು ಸದಾ ಸಿದ್ದರಿರಬೇಕು.

ಜೀವನದಲ್ಲಿ ಹಲವಾರು ಸಮಸ್ಯೆಗಳಿಂದ ಭವಿಷ್ಯ ಕರಾಳವಾಗಿ ಯಾವುದೇ ಮಾರ್ಗೋಪಾಯಗಳಿಲ್ಲದಿರುವಾಗಲೂ ಹಿಂದಿನಿಂದ ಫಿರ್ ಔನ್ ಮತ್ತು ಮುಂದೆ ಕಡಲು ಕಾಣುವಾಗ ಮೂಸಾ(ಅ)ರು ಧೈರ್ಯದಿಂದ “ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ಖಂಡಿತವಾಗಿಯೂ ದಾರಿ ತೋರುವನು.” ಎಂಬ ಭರವಸೆಯೊಂದಿಗೆ ಮುನ್ನಡೆಯುವುದೇ ಆತ್ಮ ವಿಶ್ವಾಸವಾಗಿದೆ.