ಮುಂಬೈ,ಮೇ 31: ಎನ್ಸಿಪಿ- ಕಾಂಗ್ರೆಸ್ ವಿಲೀನ ಸಾಧ್ಯತೆ ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಚರ್ಚಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಒಂದು ಗಂಟೆ ಚರ್ಚೆಯಲ್ಲಿ ಈ ಸಾಧ್ಯತೆ ತೆರೆಯಿತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡಲು ಹೊರಟ ನಂತರ ರಾಹುಲ್ ಇತರೆಲ್ಲರ ಭೇಟಿಯನ್ನು ರದ್ದು ಪಡಿಸಿದ್ದರು. ಇದರ ನಡುವೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ರ ವಸತಿಗೆ ಬಂದು ರಾಹುಲ್ ಭೇಟಿಯಾಗಿದ್ದಾರೆ. ನಂತರ ಎನ್ಸಿಪಿ-ಕಾಂಗ್ರೆಸ್ ವಿಲೀನ ಪ್ರಕ್ರಿಯೆಯ ಕುರಿತು ಸುದ್ದಿ ಬಹಿರಂಗಗೊಂಡಿತು.
ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನಮಾನ ಗಳಿಸುವುದು ಸದ್ಯ ಉದ್ದೇಶವಾಗಿದ್ದು ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು 55 ಸೀಟುಗಳ ಅಗತ್ಯವಿದೆ. ಕಾಂಗ್ರೆಸ್ಗೆ ಎನ್ಸಿಪಿಯ ಐದು ಸೀಟುಗಳು ಬಂದರೆ ಪ್ರತಿಪಕ್ಷ ನಾಯಕ ಸ್ಥಾನವು ಲಭಿಸುತ್ತದೆ. ಸೆಪ್ಟಂಬರ್-ಅಕ್ಟೋಬರ್ನಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯೂ ಇದೆ. ಆದರೆ ಎರಡು ಪಕ್ಷಗಳು ಈ ವಿಷಯದಲ್ಲಿ ಪ್ರತಿಕ್ರಿಯಿಸಲು ಮುಂದಾಗಿಲ್ಲ. ಎನ್ಸಿಪಿ ಸ್ಥಾಪಕ ನಾಯಕರಲ್ಲೊಬ್ಬರಾದ ತಾರಿಕ್ ಅನ್ವರ್ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.












