‘100 ನಾಟೌಟ್’ ಕೇಕ್ ಕತ್ತರಿಸಿ ಹಂಚುವ ಮೂಲಕ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

0
150

ಸನ್ಮಾರ್ಗ ವಾರ್ತೆ

ಮಂಗಳೂರು: ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್​ ಇಂದು ದೇಶಾದ್ಯಂತ ಪೆಟ್ರೋಲ್​ ಪಂಪ್​ಗಳಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದು, ಆಡಳಿತವು ಸೂಚಿಸಿದ ಎಲ್ಲಾ ಕೊವಿಡ್​ ಸುರಕ್ಷತಾ ನಿಯಮಕ್ಕನುಸಾರವಾಗಿ ಪಕ್ಷದ ಸ್ಥಳೀಯ ಘಟಕಗಳು ಪ್ರತಿಭಟನೆ ನಡೆಸಿತು. ಪೆಟ್ರೋಲ್​, ಡೀಸೆಲ್​​ ಸೇರಿದಂತೆ ಅಡುಗೆ ಅನಿಲ ಬೆಲೆಗಳು ಹೆಚ್ಚಾಗಿರುವುದರಿಂದ ಜನಸಾಮಾನ್ಯರಿಗೆ ಎದುರಾದ ಸಮಸ್ಯೆಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಕೆಪಿಸಿಸಿ ಇಂದು ರಾಜ್ಯದಲ್ಲಿ ‘100 ನಾಟೌಟ್’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿಭಟನೆ ನಡೆಸಿತು.

ಮಂಗಳೂರಿನ ಕೆಪಿಟಿ ಸರ್ಕಲ್ ಬಳಿಯಿರುವ ಪೆಟ್ರೋಲ್ ಬಂಕ್ ಎದುರುಗಡೆ ‘100 ನಾಟೌಟ್’ ಬರೆದ ಕೇಕ್ ಕತ್ತರಿಸಿ ಹಂಚುವ ಮೂಲಕ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗಲೂ ಮೇಲಿದ್ದರೂ 70 ವರ್ಷದಲ್ಲಿ ಪೆಟ್ರೋಲ್ ಗೆ 70 ರೂ. ಏರಿಕೆಯಾಗದಂತೆ ಕಾಂಗ್ರೆಸ್ ನೇತೃತ್ವದಲ್ಲಿದ್ದ ಕೇಂದ್ರ ಸರಕಾರ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಂಡಿತ್ತು. ಇದೀಗ ಬ್ಯಾರೆಲ್ ಬೆಲೆ ಕಡಿಮೆಯಾಗಿದೆ. ಆದರೂ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಏರಿಕೆ ಮಾಡುತ್ತಿದೆ. ಜನಸಾಮಾನ್ಯರ ಕಷ್ಟಗಳಿಗೆ ಧ್ವನಿಯಾಗಬೇಕಾದದ್ದು ವಿಪಕ್ಷಗಳ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜನರ ಸಂಕಷ್ಟವನ್ನು ಸರಕಾರದ ಮುಂದಿಡುತ್ತಿದೆ. ಸರಕಾರ ಆದಷ್ಟು ಶೀಘ್ರವಾಗಿ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಇಂದಿನಿಂದ ಆರಂಭಗೊಂಡ ಈ ಪ್ರತಿಭಟನೆಯು ಮುಂದೆ ವಿಧಾನಸಭೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಮಟ್ಟದಲ್ಲೂ ನಿರಂತರವಾಗಿ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಹಿಂದೆ ತೈಲ ಬೆಲೆ ಒಂದು ರೂ. ಏರಿಕೆ ಆದಾಗ ಜಿಲ್ಲಾಧಿಕಾರಿ ಕಚೇರಿ ಎದುರು ತಿಂಡಿಗಳನ್ನು ಮಾಡುವ ಮೂಲಕ ಪ್ರತಿಭಟಿಸುತ್ತಿದ್ದ ಬಿಜೆಪಿ ಜನಪ್ರತಿನಿಧಿಗಳು ಈಗ ಎಲ್ಲಿ ಅಡಗಿ ಕೂತಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಕೊಡಲು ಧ್ವನಿ ಎತ್ತಿ ಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ನಾಯಕರಾದ ಮೊಯಿದಿನ್ ಬಾವ, ಶಕುಂತಳಾ ಹೆಗ್ಡೆ, ಜೆ ಆರ್ ಲೋಬೊ, ಮಿಥುನ್ ರೈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಇಂಧನ ಬೆಲೆ ಏರಿಕೆ ವಿರುದ್ಧ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರುಗಳಾದ ಶಶಿಧರ್ ಹೆಗ್ಡೆ, ಪಿ.ವಿ.ಮೋಹನ್, ಎ.ಸಿ ವಿನಯ್ ರಾಜ್, ಪ್ರತಿಭಾ ಕುಳಾಯಿ, ಭಾಸ್ಕರ ಕೆ., ಅಪ್ಪಿ, ನವೀನ್ ಡಿಸೋಜ, ಟಿ.ಕೆ.ಸುಧೀರ್, ಶಬೀರ್, ಸೌಹಾನ್ ಎಸ್.ಕೆ., ಸವಾದ್ ಸುಳ್ಯ, ವಿಶ್ವಾಸ್ ಕುಮಾರ್ ದಾಸ್, ವಿವೇಕ್ ರಾಜ್, ಸಂಶುದ್ದೀನ್, ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here