ವೈದ್ಯರ ಸಲಹೆ ಇಲ್ಲದೆ ಪ್ಯಾರಾಸಿಟಾಮೋಲ್ ಸೇವನೆ ಅಪಾಯಕಾರಿ : ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಆರ್ ತಿಮ್ಮಯ್ಯ

0
248

ಸನ್ಮಾರ್ಗ ವಾರ್ತೆ

ಮಂಗಳೂರು:- ಇತ್ತೀಚೆಗೆ ಜ್ವರ ಕಾಣಿಸಿಕೊಂಡರೆ ಹೆಚ್ಚಾಗಿ ನೋವು ನಿವಾರಕಗಳನ್ನು (ಪ್ಯಾರಸಿಟಾಮೋಲ್) ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ಡೆಂಗ್ಯೂ ಜ್ವರದಲ್ಲಿ ಬಿಳಿ ರಕ್ತ ಕಣವು ಕಡಿಮೆಯಾಗುತ್ತದೆ ಆದ್ದರಿಂದ ಜ್ವರ ಇರುವ ಸಂದರ್ಭದಲ್ಲಿ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡಲ್ಲಿ ಸಾವು ಸಂಭವಿಸಬಹುದು, ಅಥವಾ ಗಂಭೀರ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಜಿಲ್ಲಾ ಆರೋಗ್ಯಧಿಕಾರಿ ಎಚ್.ಆರ್ ತಿಮ್ಮಯ್ಯ ಹೇಳಿದ್ದಾರೆ.

ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ತುರ್ತು ಸಭೆಯಲ್ಲಿ ಮಾತನಾಡಿದರು.

ಡೆಂಗ್ಯೂ ಸಂದರ್ಭದಲ್ಲಿ ಪಪ್ಪಾಯಿ ಎಲೆಯ ಜ್ಯೂಸುಗಳನ್ನು ಮಾಡಿ ಸೇವಿಸುವುದು ಕೂಡ ಹಾನಿಕಾರಕವಾಗಿದೆ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ಸ್ವಯಂ ಚಿಕಿತ್ಸೆಯನ್ನು ಮಾಡಬಾರದು ಎಂದು ಅವರು ಹೇಳಿದರು.

ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಮಾತನಾಡಿ ಡೆಂಗ್ಯೂ ಜ್ವರ ಸಂಗ್ರಹವಾದ ನೀರಿನಲ್ಲಿ ಲಾರ್ವಗಳ ಉತ್ಪತ್ತಿಯಿಂದ, ಈಡಿಸ್ ಸೊಳ್ಳೆಗಳ ಮುಖಾಂತರ ಹರಡುತ್ತದೆ, ಡೆಂಗ್ಯೂ ರೋಗಕ್ಕೆ ಯಾವುದೇ ಶಾಶ್ವತ ಔಷಧಿ ಇಲ್ಲ ಕೇವಲ ಸೊಳ್ಳೆ ನಿಯಂತ್ರಣದಿಂದ ಮಾತ್ರ ರೋಗ ನಿರ್ಮೂಲನೆ ಸಾಧ್ಯ. ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಭಯ ಇರಬಾರದು ಜಾಗೃತಿ ಇರಬೇಕು ಎಂದರು.

ಡೆಂಗ್ಯೂ ರೋಗದ ಲಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ಮೈಕೈ ನೋವು ಮತ್ತು ಕೀಲು ನೋವು, ತೀವ್ರವಾದ ತಲೆನೋವು ಹೆಚ್ಚಾಗಿ ಹಣೆ ಮುಂಭಾಗ, ಕಣ್ಣಿನ ಹಿಂಭಾಗ ನೋವು, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಗುರುತುಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ, ವಾಕರಿಕೆ ಮತ್ತು ವಾಂತಿ ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ ಎಂದರು.

ಡೆಂಗ್ಯೂ ನಿರ್ಮೂಲನೆಗೆ ಮುಂಜಾಗ್ರತ ಕ್ರಮಗಳು

ನೀರಿನ ತೊಟ್ಟಿಗಳು, ಡ್ರಮ್, ಬ್ಯಾರೆಲ್ ಮತ್ತು ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಬೇಕು, ಮನೆಯ ಮೇಲೆ ಮತ್ತು ಸುತ್ತಮುತ್ತಲಿನ ಮಳೆಯ ನೀರು ಸಂಗ್ರಹವಾಗುವಂತಹ ಪ್ಲಾಸ್ಟಿಕ್ ವಸ್ತುಗಳು, ಟೈಯರ್ ಗಳು, ಒಡೆದ ತೆಂಗಿನ ಚಿಪ್ಪು ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.

ಏರ್ ಕೂಲರ್, ಹೂವಿನ ಕುಂಡ, ಫೈರ್ ಬಕೆಟ್, ಇತ್ಯಾದಿಗಳ ನೀರನ್ನು ಪ್ರತಿವಾರ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಬೇಕು.

ಹಗಲಿನಲ್ಲಿ ನಿದ್ದೆ ಮಾಡುವ ಅಥವಾ ವಿಶ್ರಾಂತಿ ಪಡೆಯುವವರು ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಯನ್ನು ತಪ್ಪದೇ ಬಳಸಬೇಕು.

ನಿಂತ ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, 3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು, ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ಡಾ.ನವೀನ್ ಚಂದ್ರ ಕುಲಾಲ್ ಅವರು ತಿಳಿಸಿದರು.

ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನರ್ಸಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.