ಮೈಸೂರು- ವಿದೇಶಿಯರ ಸಂಪರ್ಕಕ್ಕೆ ಬಾರದ ಸ್ಥಳೀಯ ವ್ಯಕ್ತಿಯಲ್ಲಿ ಸೋಂಕು, ಕಲಬುರ್ಗಿಯಲ್ಲಿ ಮನೆಬಾಗಿಲಿಗೆ ಅವಶ್ಯಕ ವಸ್ತುಗಳು, ರಾಜ್ಯದಲ್ಲಿ ಒಂದೇ ದಿನ 10, ದೇಶದಲ್ಲಿ 667 ಸೋಂಕಿತರು

0
1083

ಸನ್ಮಾರ್ಗ ವಾರ್ತೆ

ಬೆಂಗಳೂರು ಮಾ. ರಾಜ್ಯದಲ್ಲಿ ಬುಧವಾರದಿಂದ ಗುರುವಾರದ ನಡುವೆ ಹೊಸದಾಗಿ ಹತ್ತು ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಬುಧವಾರದ ಮಧ್ಯಾಹ್ನದವರೆಗೆ 41 ಇದ್ದ ಸೋಂಕಿತರ ಸಂಖ್ಯೆ ಗುರುವಾರಕ್ಕಾಗುವಾಗ ಅದು 51 ಕ್ಕೆ ಏರಿಕೆಯಾಗಿದೆ. ಮೂಲಕ ಕರ್ನಾಟಕವು ಮಹಾರಾಷ್ಟ್ರ ಮತ್ತು ಕೇರಳದ ನಂತರ ಮೂರನೇ ಸ್ಥಾನಕ್ಕೆ ಜಿಗಿದಿದೆ. ಮಹಾರಾಷ್ಟ್ರದಲ್ಲಿ 128 ಪ್ರಕರಣಗಳು ದಾಖಲಾಗಿದ್ದರೆ ಕೇರಳದಲ್ಲಿ 118 ಪ್ರಕರಣಗಳು ದಾಖಲಾಗಿದ್ದುವು.

ಒಂದೇ ದಿನದಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹತ್ತರಷ್ಟು ಹೆಚ್ಚಾಗಿರುವುದು ಆತಂಕಕಾರಿ ಎನ್ನಲಾಗುತ್ತಿದ್ದು ಈ ಬೆಳವಣಿಗೆಯ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮೈಸೂರಿನಿಂದ ಆತಂಕಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು ಸ್ಥಳೀಯ ವ್ಯಕ್ತಿಯೋರ್ವರಲ್ಲಿ ಕೊರೋನಾ ಪತ್ತೆಯಾಗಿದೆ. 35 ವರ್ಷದ ವ್ಯಕ್ತಿಯಾಗಿರುವ ಇವರು ಎಲ್ಲಿಗೂ ಪ್ರವಾಸ ಮಾಡಿರಲಿಲ್ಲ ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಂಜನಗೂಡಿನಲ್ಲಿ ಔಷಧ ಉತ್ಪಾದನಾ ಕಂಪೆನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದು ಇವರ ನೇರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ. ವಿದೇಶಕ್ಕೆ ಪ್ರಯಾಣ ಮಾಡದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಮೊದಲ ಸೋಂಕು ಇದು ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಕಲಬುರ್ಗಿಯಲ್ಲಿ ಮನೆಬಾಗಿಲಿಗೆ ದೈನಂದಿನ ಅವಶ್ಯಕ ತರಕಾರಿಗಳನ್ನು ತಲುಪಿಸಲು ಜಿಲ್ಲಾಧಿಕಾರಿ ವ್ಯವಸ್ಥೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ವ್ಯಾಪಾರಿ ಹಾಗೂ ಪಾಲಿಕೆ ಸಿಬ್ಬಂದಿಯನ್ನು ಅವರು ನಿಯೋಜಿಸಿದ್ದಾರೆ.

ನಗರದ ಎಲ್ಲ ವಾರ್ಡಗಳು, ಬಡಾವಣೆ ಹಾಗೂ ಜನವಸತಿ ಪ್ರದೇಶಗಳಿಗೆ ತರಕಾರಿಗಳನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದ್ದಾರೆ. ವಿಶೇಷ ಎಂದರೆ ಪ್ರತಿಯೊಬ್ಬ ತರಕಾರಿ ವ್ಯಾಪಾರಿಯ ಜೊತೆಗೆ ಒಬ್ಬ ಪಾಲಿಕೆ ಸಿಬ್ಬಂದಿ ಉಸ್ತುವಾರಿಯಾಗಿ ಇರುತ್ತಾರೆ. ತಳ್ಳು ಗಾಡಿ ಮತ್ತು ವಾಹನಗಳಲ್ಲಿ ತರಕಾರಿಗಳನ್ನು ಪ್ರತಿಯೊಂದು ವಾರ್ಡುಗಳಿಗೆ ತಲುಪಿಸಿ ಜನಸಂದಣಿ ಆಗದಂತೆ ನೋಡಿಕೊಂಡು ಅದರ ಚಿತ್ರವನ್ನು ಪಾಲಿಕೆಗೆ ರವಾನಿಸುವ ಆದೇಶವನ್ನು ಹೊರಡಿಸಿದ್ದಾರೆ. ಕಲಬುರ್ಗಿಯ 55 ವಾರ್ಡುಗಳಿಗಾಗಿ 96 ತಂಡಗಳನ್ನು ರಚಿಸಲಾಗಿದೆ ಎಂಬ ಮಾಹಿತಿ ಇದೆ.

ಇದೇ ವೇಳೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದೇಶದಲ್ಲಿ ಜಾಸ್ತಿಯಾಗುತ್ತಲೇ ಇದ್ದು ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 667 ಪ್ರಕರಣಗಳು ವರದಿಯಾಗಿವೆ ಮತ್ತು ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಹರಿಯಾಣದಲ್ಲಿ 18 ಮಂದಿಗೆ ಸೋಂಕು ದೃಡಪಟ್ಟಿದೆ. ತೆಲಂಗಾಣದಲ್ಲಿ ಈವರೆಗೆ 43 ಪ್ರಕರಣಗಳು ದೃಢಪಟ್ಟಿದ್ದು ಓರ್ವರು ಗುಣಮುಖರಾಗಿದ್ದಾರೆ. ಲಡಾಕ್ ನಲ್ಲಿ ಈವರೆಗೆ 13 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.