ಕೊರೋನಾ: 1.7 ಲಕ್ಷ ಕೋಟಿ ರೂಪಾಯಿಯ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ; 80 ಕೋಟಿ ಬಡ ಜನರಿಗೆ ಅಕ್ಕಿ, ಗೋಧಿ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ

0
539

ಸನ್ಮಾರ್ಗ ವಾರ್ತೆ

21 ದಿನಗಳ ಲಾಕ್ ಡೌನ್ ಕ್ರಮದಿಂದ ಸಾಮಾನ್ಯ ಜನರ ಬದುಕು ದುರ್ಬರವಾಗಿರುವ ಸ್ಥಿತಿಯಲ್ಲಿ ಕೇಂದ್ರ ಸರಕಾರ ಅವರ ನೆರವಿಗೆ ಮುಂದೆ ಬಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ದೇಶದ ಸಂಕಷ್ಟ ಪೀಡಿತ ಜನರಿಗಾಗಿಯೇ ವಿಶೇಷ ಪ್ಯಾಕೇಜನ್ನು ಘೋಷಿಸಿದ್ದಾರೆ. ಅವರ ಘೋಷಣೆಯ ಮುಖ್ಯಾಂಶಗಳು ಹೀಗಿವೆ-

ಯಾರನ್ನೂ ಹಸಿವಿನಿಂದ ಬಳಲು ಬಿಡುವುದಿಲ್ಲ ಎಂದಿರುವ ಅವರು ವಲಸೆ ಬಂದಿರುವ ಕಾರ್ಮಿಕರು, ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರಿಗಾಗಿ 1.7 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಸಿದ್ಧ ಇದೆ ಎಂದವರು ಹೇಳಿದ್ದಾರೆ.

ಜನಧನ ಖಾತೆ ಹೊಂದಿರುವ ಮಹಿಳೆಯರು ಪ್ರತಿ ತಿಂಗಳು 500 ರೂಪಾಯಿ ಪಡೆಯಲಿದ್ದಾರೆ. ಮುಂದಿನ ಮೂರು ತಿಂಗಳವರೆಗೆ ಇದು ಮುಂದುವರಿಯಲಿದ್ದು ಇದರಿಂದಾಗಿ 20 ಕೋಟಿ ಮಹಿಳಾ ಖಾತೆದಾರರಿಗೆ ಅನುಕೂಲವಾಗಲಿದೆ.

ಮುಂದಿನ ಮೂರು ತಿಂಗಳವರೆಗೆ ಪ್ರಧಾನ ಮಂತ್ರಿಗಳ ಗರೀಬ್ ಅನ್ನ ಕಲ್ಯಾಣ ಯೋಜನೆ ಇರಲಿದ್ದು ಇದರಲ್ಲಿ 80 ಕೋಟಿ ಬಡಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಜಾರಿಯಲ್ಲಿರುವ 5 ಕೆಜಿ ಅಕ್ಕಿ ಅಥವಾ ಐದು ಕೆಜಿ ಗೋಧಿ ಆಹಾರ ಪದಾರ್ಥಗಳ ಜೊತೆಗೆ 1ಕೆಜಿ ಬೇಳೆಕಾಳು ಸಿಗಲಿದೆ.

ಕೊರೊನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಗಳು ಮತ್ತು ಸೋಂಕಿನ ಅಪಾಯ ಇರುವವರಿಗೆ ಮೂರು ತಿಂಗಳವರೆಗೂ 50 ಲಕ್ಷ ಮೊತ್ತದ ಆರೋಗ್ಯ ವಿಮೆ ಒದಗಿಸಲಾಗುತ್ತದೆ.

8. 6 ಕೋಟಿ ರೈತರು ಏಪ್ರಿಲ್ ಮೊದಲ ವಾರದಲ್ಲಿ 2000 ರೂಪಾಯಿ ಪಡೆಯಲಿದ್ದು ನೇರ ನಗದು ವರ್ಗಾವಣೆ ಯೋಜನೆಯ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ.

ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ ಮೂರು ತಿಂಗಳವರೆಗೂ 3 ಅನಿಲ ಸಿಲಿಂಡರ್ ಗಳು ಉಚಿತವಾಗಿ ಸಿಗಲಿದೆ. ಇದರಿಂದ 8 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ.

ನರೇಗಾ ಕಾರ್ಯಕ್ರಮದಡಿಯಲ್ಲಿ ದಿನಗೂಲಿಯನ್ನು 182 ರೂಪಾಯಿಯಿಂದ 202 ಕ್ಕೆ ಹೆಚ್ಚಿಸಲಾಗಿದೆ.