ಕೊರೋನಾ- ಇಸ್ಕಾನ್ ನ 5 ಮಂದಿ ಗಂಭೀರ: ಲಂಡನ್ ಇಸ್ಕಾನ್ ಕೇಂದ್ರದಲ್ಲಿ ಕೊರೋನಾ ಭೀತಿ, 21 ಅನುಯಾಯಿಗಳಿಗೆ ಸೋಂಕು ದೃಢ

0
683

ಸನ್ಮಾರ್ಗ ವಾರ್ತೆ

ಲಂಡನ್, ಏಪ್ರಿಲ್ 5- ಕೊರೋನಾ ವೈರಸ್ ಇಸ್ಕಾನ್ ನ ಮೇಲೆ ತೀವ್ರ ಹೊಡೆತವನ್ನು ನೀಡಿದೆ. ಲಂಡನ್ನಿನಲ್ಲಿರುವ ಇಸ್ಕಾನಿನ ಭಕ್ತಿವೇದಾಂತ ಕೇಂದ್ರದಲ್ಲಿ 21 ಮಂದಿಗೆ ಕೋರೋನಾ ದೃಢಪಟ್ಟಿದ್ದು ಐವರು ಅನುಯಾಯಿಗಳುಗಂಭೀರವಾಗಿದ್ದಾರೆ ಎಂದು ಇಸ್ಕಾನ್ ನ iskconnews.org/ ಹೇಳಿಕೊಂಡಿದೆ. ಈ ಕುರಿತಂತೆ ಮಾಧವ ಸ್ಮಲ್ಲೆನ್ ಅವರು ವಿಸ್ತೃತವಾಗಿ ವರದಿ ಮಾಡಿದ್ದಾರೆ.

ಭಕ್ತಿವೇದಾಂತ ಕೇಂದ್ರವನ್ನು ಉಳಿಸಿಕೊಳ್ಳುವುದಕ್ಕಾಗಿ 1990ರಿಂದಲೇ ಅಭಿಯಾನ ನಡೆಸಿದ್ದ ಮತ್ತು ಬ್ರಿಟನ್ನಿನ ಹಲವು ಮಂದಿರಗಳಿಗೆ ಸಲಹೆ, ಮಾರ್ಗದರ್ಶನ ನೀಡಿದ್ದ ರಾಮೇಶ್ವರ ದಾಸ್ ಕೂಡ ಸೋಂಕು ದೃಢಪಟ್ಟವರಲ್ಲಿ ಒಳಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಭಕ್ತರಲ್ಲಿ 30 ಮತ್ತು 40 ವರ್ಷಗಳ ನಡುಪ್ರಾಯದವರು ಹೆಚ್ಚಿದ್ದಾರೆ. ಇದರಲ್ಲಿ ಇಸ್ಕಾನ್ ಗೆ ಬ್ರಿಟನ್ನಿನಲ್ಲಿ ಪ್ರಥಮವಾಗಿ ಸೇರ್ಪಡೆಗೊಂಡಿದ್ದ ಧನಂಜಯ ದಾಸ್ ಕೂಡ ಸೇರಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಭೂಮಿಯಲ್ಲಿ ಯಾರೆಲ್ಲ ಕೊರೋನಾದಿಂದ ಬಾಧಿತರಾಗಿದ್ದಾರೋ ಅವರೆಲ್ಲರಿಗೂ ನಮ್ಮ ಹೃದಯ ಮಿಡಿಯುತ್ತದೆ ಎಂದು ಇಸ್ಕಾನ್ ನ ಪ್ರಗೋಸಾ ದಾಸ್ ಅವರು ಹೇಳಿದ್ದಾರೆ. ಮಾರ್ಚ್ 12 ಮತ್ತು 15 ರಂದು ಭಕ್ತಿವೇದಾಂತ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಗಳಿಂದ ಕೊರೋನಾ ಹೆಚ್ಚಾಗಿ ಹರಡಿವೆ ಎಂದು ನಂಬಲಾಗಿದೆ.

ಮಾರ್ಚ್ 12ರಂದು ಶ್ರುತಿಧರ್ಮ ಪ್ರಭು ಅವರ ಅಂತ್ಯಕ್ರಿಯೆ ನಡೆದಿತ್ತು ಮತ್ತು 15ರಂದು ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆದಿತ್ತು. ಆದರೆ, ಬ್ರಿಟನ್ ಲಾಕ್ ಡೌನ್ ಘೋಷಿಸಿದ್ದು ಮಾರ್ಚ್23ರಂದು ಎಂದು ಪ್ರಗೋಸಾ ದಾಸ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ವರದಿಯಂತೆ ಬ್ರಿಟನಿನ ಸುಮಾರು ನೂರರಷ್ಟು ಇಸ್ಕಾನ್ ಅನುಯಾಯಿಗಳಿಗೆ ಕೊರೋನಾ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

ಈಗ 21 ಮಂದಿಗೆ ಕೊರೋನಾ ದೃಢಪಟ್ಟಿದ್ದು ಸಂಖ್ಯೆ ಇದಕ್ಕಿಂತ ಸ್ವಲ್ಪ ಹೆಚ್ಚಿರಬಹುದು ಎಂದು ಇಸ್ಕಾನ್ ನ ಪ್ರಗೋಸಾ ದಾಸ್ ಕೂಡಾ ಅಭಿಪ್ರಾಯಪಟ್ಟಿದ್ದಾರೆ.

ಮೇಲಿನ ಎರಡೂ ಕಾರ್ಯಕ್ರಮಗಳಲ್ಲಿ ಸುಮಾರು ಸಾವಿರ ಮಂದಿ ಭಾಗವಹಿಸಿದ್ದು, ಅವರ ಬಗ್ಗೆ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ. ಮಾರ್ಚ್ 16 ರಿಂದ ಬ್ರಿಟನ್ನಿನಲ್ಲಿ ಇಸ್ಕಾನ ದೇವಾಲಯಗಳನ್ನು ಮುಚ್ಚಲಾಗಿದೆ ಎಂದು ಪ್ರಗೋಸಾ ದಾಸ್ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.