ಭೂಮಿಯನ್ನು ನರಕಗೊಳಿಸಿ ಚಂದ್ರನಲ್ಲಿ ನಡೆಯುವುದೇ?

0
192

ಸನ್ಮಾರ್ಗ ವಾರ್ತೆ

✍️ಎಜಾಝ್ ಅಹ್ಮದ್ ಅಸ್ಲಂ
ರೇಡಿಯನ್ಸ್ ವೀವ್ಸ್ ವೀಕ್ಲಿ

ಶುಕ್ರವಾರ, ಜುಲೈ 14, 2023, ಭಾರತೀಯ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿದೆ. ಚಂದ್ರಯಾನ-3 ಅನ್ನು ಲ್ಯಾಂಡರ್ ಮತ್ತು ರೋವರ್ ನೊಂದಿಗೆ ಆರ್ಬಿಟರನತ್ತ ತಳ್ಳಲಾಯಿತು. ಚಂದ್ರನ ಮೇಲ್ಮೈಯಲ್ಲಿ ನಡೆಯಲು ಇದು ನಮ್ಮ ಮೂರನೇ ಪ್ರಯತ್ನ. ಇನ್‌ಶಾ ಅಲ್ಲಾಹ್, ಈ ಬಾರಿ ಯಶಸ್ಸನ್ನು ಪಡೆಯಲಿ.

ಈ ಮಿಷನ್ ನಮ್ಮ ವೈಜ್ಞಾನಿಕ ಜ್ಞಾನ ಮತ್ತು ನಮ್ಮ ವಿಜ್ಞಾನಿಗಳ ಸಾಮರ್ಥ್ಯದ ಅಂಗೀಕಾರವಾಗಿದೆ. ಈ ಯೋಜನೆಗೆ 615 ಕೋಟಿ ವೆಚ್ಚವಾಗಿದೆ. ಹಾಗಂತ, ಮುಂದುವರಿದ ದೇಶಗಳು ಇಂತಹ ಯೋಜನೆಗಳಿಗೆ ಖರ್ಚು ಮಾಡುವ ಒಂದು ಪುಟ ಅಂಶ ಭಾಗವೇ ಈ ವೆಚ್ಚ. ಈ ಬಾರಿ ಯಶಸ್ವಿಯಾದರೆ ಭಾರತ ಅಂತಹ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿ ಸಿದ ದೇಶಗಳ ‘ಎಲೈಟ್ ಕ್ಲಬ್’ನ ಸದಸ್ಯ ರಾಷ್ಟ್ರವಾಗುತ್ತದೆ. ಒಂದೇ ರಾಕೆಟ್‌ನಿಂದ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ದಾಖಲೆಯನ್ನು ನಿರ್ಮಿಸಿದ ವಿಶ್ವಾಸಾರ್ಹ ರಾಷ್ಟ್ರವಾಗಿ ದೇಶ ಹೊರ ಹೊಮ್ಮಲಿದೆ. ಅಲ್ಲದೆ ಇದು ದೇಶದ ಖ್ಯಾತಿಯನ್ನು ಹೆಚ್ಚಿಸುತ್ತದೆ.

ಇದೇವೇಳೆ ಮಾನವ ಸಂಬಂಧಗಳು, ಸ್ಥಾನಮಾನ ಮತ್ತು ಮಾನವ ಹಕ್ಕುಗಳ ದಾಖಲೆಯತ್ತ ನಾವು ನಮ್ಮ ಗಮನವನ್ನು ತಿರುಗಿಸಿದಾಗ, ವಿಷಾದಕರ ಅಂಶವನ್ನು ಕಾಣುತ್ತೇವೆ. ಮತ್ತು ಅತ್ಯಂತ ಚಿಂತಿತರಾಗುತ್ತೇವೆ. ನಮ್ಮ ಬೇಜವಾಬ್ದಾರಿ ರಾಜಕೀಯ ವ್ಯಕ್ತಿಗಳಿಂದಾಗಿ ಈ ಸ್ಥಿತಿ ಉಂಟಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಗಳ ನಡುವೆಯೂ ಇದು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಪ್ರತಿಪಾದಿಸಿದರು. ಆದರೆ ಅದು ನಕಾರಾತ್ಮಕ ಕಾಮೆಂಟ್‌ಗಳು ಮತ್ತು ಅಪಹಾಸ್ಯಕ್ಕೆ ಕಾರಣವಾಯಿತು. ದಿನದಿಂದ ದಿನಕ್ಕೆ ಆಡಳಿತ ಪಕ್ಷದ ನಾಯಕರಿಂದ ನಕಾರಾತ್ಮಕ ಮತ್ತು ನಾಚಿಕೆಗೇಡಿನ ಹೇಳಿಕೆಗಳನ್ನು ನಾವು ಕೇಳುತ್ತಿದ್ದೆ.

ಇತ್ತೀಚೆಗೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರು ಅಸ್ಸಾಂನಲ್ಲಿ ತರಕಾರಿಗಳ ಬೆಲೆ ಏರಿಕೆಗೆ ಮಿಯಾ (ಮುಸ್ಲಿಮರು) ಕಾರಣ ಎಂದು ಆರೋಪಿಸಿದರು. ಇದನ್ನು ಅವರು ಕೆಲವು ಟಿವಿ ಚಾನೆಲ್‌ಗಳಲ್ಲೂ ಹೇಳಿದರು. ಅಸ್ಸಾಮಿಗಳು ಈ ವ್ಯವಹಾರವನ್ನು ಮಾಡದಂತೆ ಈ ಮೀಯಾಗಳು ತಡೆಯುತ್ತಾರೆ ಎಂದು ಕೂಡ ಅವರು ಹೇಳಿದರು. ಅಸ್ಸಾಮಿ ವ್ಯಾಪಾರಿಗಳು ಗ್ರಾಹಕರಿಂದ ಸುಲಿಗೆ ಮಾಡುವುದಿಲ್ಲ ಎಂದೂ ಅವರು ಹೇಳಿದರು. ಗುವಾಹಟಿಯಲ್ಲಿ ಮಿಯಾಗಳಿಗೆ ತರಕಾರಿ ಇತ್ಯಾದಿಗಳನ್ನು ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಸಾಂವಿಧಾನಿಕ ಸ್ಥಾನದಲ್ಲಿ ಇದ್ದು “ಒಡೆದು ಆಳುವ” ರಾಜಕೀಯಕ್ಕೆ ಸಮಾನವಾದ ವಿಷಕಾರಿ ವಿಷಯಗಳನ್ನು ನಾಚಿಕೆಯಿಲ್ಲದೆ ಈ ಮುಖ್ಯಮಂತ್ರಿ ಆಡುತ್ತಾರೆ. ಇದು ಸಾಂವಿಧಾನಿಕ ತತ್ವಗಳು, ಪ್ರಜಾಪ್ರಭುತ್ವ ಮತ್ತು ಸಮಾನತೆಗೆ ವಿರುದ್ಧವಾಗಿಲ್ಲವೇ? ಎರಡು ವಾರಗಳ ಹಿಂದೆ ಇದೇ ಮುಖ್ಯಮಂತ್ರಿ ಬರಾಕ್ ಹುಸೇನ್ ಒಬಾಮ ರಂತಹವರು ಭಾರತದಲ್ಲಿ ಅನೇಕರಿದ್ದಾರೆ ಎಂದೂ ಹೇಳಿದ್ದರು. ಮೊದಲು ಭಾರತೀಯ ಒಬಾಮರವರುಗಳೊಂದಿಗೆ ವ್ಯವಹರಿಸಲಾಗುವುದು, ನಂತರ ಅಮೆರಿಕದ ಒಬಾಮಾರನ್ನು ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದರು. ಈ ರೀತಿಯ ಹೇಳಿಕೆಯು ಪ್ರಪಂಚದಾದ್ಯಂತ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದೆ.

ಪೂರ್ವಾಗ್ರಹ ಮತ್ತು ಸಂಕುಚಿತ ಚಿಂತನೆಯು ಇಡೀ ವಿಶ್ವದಲ್ಲಿ ನಮ್ಮ ದೇಶದ ಮಾನ ಹರಾಜಿಗೆ ಕಾರಣವಾಗುತ್ತದೆ. ಋಣಾತ್ಮಕ ಮತ್ತು ಸಂಕುಚಿತ ವಿಧಾನವನ್ನು ನಿರುತ್ಸಾಹಗೊಳಿಸಬೇಕು ಮತ್ತು ಪೂರ್ಣ ಬಲದಿಂದ ಖಂಡಿಸಬೇಕು. ನಾವು ಚಂದ್ರನ ಮೇಲೆ ಹೆಮ್ಮೆಯಿಂದ ನಡೆಯಬಹುದು, ಆದರೆ ನಮ್ರತೆ ಮತ್ತು ಮಾನವೀಯತೆಯಿಂದ ನಡೆಯುವುದು ಹೆಚ್ಚು ಮುಖ್ಯವಾಗಿದೆ. ಮನುಷ್ಯನು ನಕ್ಷತ್ರಗಳ ಕಕ್ಷೆಯನ್ನು ಹೆಮ್ಮೆಯಿಂದ ಪತ್ತೆ ಹಚ್ಚುತ್ತಿದ್ದರೂ ಭೂಮಿಯ ಮೇಲಿನ ತನ್ನ ಆಲೋಚನೆಗಳ ಹಾದಿಯಲ್ಲಿ ನಡೆಯಲು ದಯನೀಯವಾಗಿ ವಿಫಲನಾಗಿರುವುದು ದುರದೃಷ್ಟಕರ ಎಂದು ಅಲ್ಲಮ ಇಕ್ಬಾಲ್ ಹೇಳುತ್ತಾರೆ. ಚಂದ್ರಯಾನದ ಯಶಸ್ಸನ್ನು ದೊಡ್ಡ ಸಾಧನೆ ಎಂಬುವುದಕ್ಕಿಂತ ಮಾನವರನ್ನು ಪ್ರೀತಿಸುವುದು ದೊಡ್ಡ ಸಾಧನೆಯಾಗಿದೆ.

ಅನು: ಮುಹಮ್ಮದ್ ಮರಕಡ