ಸನ್ಮಾರ್ಗ ವಾರ್ತೆ-
ಮಂಗಳೂರು: ಆ.29- ದೆಹಲಿಯಲ್ಲಿ ನಡೆದ ಮೂರು ದಿನಗಳ ಸಮುದಾಯ ಬಾನುಲಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳೂರಿನ ರೇಡಿಯೋ ಸಾರಂಗ್ 107.8 F m ಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ದೇಶದ ಸುಮಾರು 225 ಬಾನುಲಿ ಕೇಂದ್ರಗಳು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ, ಉತ್ತಮ, ಸೃಜನಶೀಲ ಹಾಗು ಕ್ರಿಯಾತ್ಮಕ ವಿಭಾಗಗಳ ಸಾಲಿನಲ್ಲಿ ರೇಡಿಯೋ ಸಾರಂಗ್ 107.8 F m ಪ್ರಥಮ ಬಹುಮಾನ ಪಡೆದಿದೆ. ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಕೊಡಮಾಡುವ ಈ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೆಕರ್ ಪ್ರಧಾನ ಮಾಡಿದರು. ರೇಡಿಯೋ ಸಾರಂಗ್ ಈ ಬಾರಿ ಎರಡು ವಿಭಾಗಗಳಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಅಂಧತ್ವ ವನ್ನು ಮೆಟ್ಟಿ ನಿಂತವರ ಬಗೆಗೆನ ಅಂತರ್ ಬೆಳಕು ಕಾರ್ಯಕ್ರಮಕ್ಕೆ ಈ ಪ್ರಶಸ್ತಿ ಬಂದಿದೆ. ಕರ್ನಾಟಕದಲ್ಲಿ ಈ ಪ್ರಶಸ್ತಿಯನ್ನು ಗೆದ್ದುಕೊಂಡ ಏಕೈಕ ಬಾನುಲಿ ಕೇಂದ್ರವಾಗಿದೆ ಸಾರಂಗ್.

ಅಂತರ್ ಬೆಳಕು ಅನ್ನುವುದು ಸಾರಂಗ್ ಬಾನುಲಿ ಕೇಂದ್ರದ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದು ಅಂಧರನ್ನು ಗುರಿಮಾಡಿಕೊಂಡು ನಡೆಸುವ ಕಾರ್ಯಕ್ರಮವಾಗಿದೆ. ಓರ್ವ ಅಂಧರನ್ನು ಗುರುತಿಸಿ ಅವರ ದಿನಚರಿ, ಬದುಕು- ಭಾವ ಇತ್ಯಾದಿಗಳ ಸುತ್ತ ಮಾತಾಡುವ ಕಾರ್ಯಕ್ರಮ ಅಂತರ್ ಬೆಳಕು. ಇದೊಂದು ಸರಪಣಿ ಕಾರ್ಯಕ್ರಮ. ಓರ್ವ ಅಂಧರನ್ನು ಭೇಟಿಯಾಗಿ ಅವರ ಮಾತುಗಳನ್ನು ದಾಖಲಿಸಿಕೊಂಡ ಬಳಿಕ ಅವರು ಸೂಚಿಸಿದ ಇನ್ನೋರ್ವ ಅಂಧರ ಬಳಿಗೆ ಹೋಗಿ ಅವರ ಎದೆಯ ದನಿಗೆ ಕಿವಿಗೊಡಲಾಗುತ್ತದೆ. ಆ ಬಳಿಕ ಅವರು ಸೂಚಿಸಿದ ಇನ್ನೋರ್ವ ಅಂಧರ ಬಳಿಗೆ ಹೋಗಿ ಅವರನ್ನು ಮಾತಾಡಿಸಲಾಗುತ್ತದೆ. ರೇಡಿಯೋವನ್ನೇ ಬದುಕು ಮಾಡಿಕೊಂಡವರು, ಅದನ್ನೇ ಅವಲಂಭಿಸಿಕೊಂಡ ಅಂಧರು ಸಾರಂಗ್ ಕೇಳುಗರಲ್ಲಲ್ಲಿ 25% ಇದ್ದಾರೆ ಎಂದು ಆರ್ ಜೆ ಅಭಿಷೇಕ್ ಹೇಳುತ್ತಾರೆ. ಅದೊಂದು ಬೇರೆಯದೇ ಪ್ರಪಂಚ. ಸಾರಂಗ್ ರೇಡಿಯೋವನ್ನು ಆಲಿಸಿ, ಅದರಿಂದಾಗಿಯೇ ಪರಿಚಿತರಾಗಿ, ಪರಸ್ಪರ ಮೆಚ್ಚಿಕೊಂಡು ಮದುವೆಯಾದ ಅಂಧ ದಂಪತಿಗಳೂ ಮಂಗಳೂರಿನಲ್ಲಿದ್ದಾರೆ ಎಂದು ಅಭಿಷೇಕ್ ಹೇಳುತ್ತಾರೆ. ಅಂಧರ ಎದೆಯ ದನಿಗೆ ಕಿವಿಯಾಗಿ ಇದೀಗ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಸಾರಂಗ್ ಗೆ ಈಗ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬರುತ್ತಿವೆ.












