ರೈತ ಹೋರಾಟ ಮೂರನೇ ದಿನಕ್ಕೆ: ದಿಲ್ಲಿಯತ್ತ ಹರಿದು ಬರುತ್ತಿರುವ ರೈತರ ಅಲೆ

0
638

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.28: ಕೇಂದ್ರ ಸರಕಾರದ ಮೂರನೇ ರೈತ ಕಾನೂನಿನ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿವಿಧ ರಾಜ್ಯಗಳ ರೈತರ ರಾಷ್ಟ್ರ ರಾಜಧಾನಿಗೆ ಹೊರಟಿರುವ ದಿಲ್ಲಿ ಚಲೋ ಮೂರನೆ ದಿವಸಕ್ಕೆ ಕಾಲಿಟ್ಟಿದೆ. ಹೋರಾಟದ ದಮನಕ್ಕೆ ಪೊಲೀಸರು ಶ್ರಮಿಸುತ್ತಿರುವುದರ ನಡುವೆ ಮತ್ತಷ್ಟು ರೈತರು ದಿಲ್ಲಿಗೆ ಬರಲಿದ್ದಾರೆ ಎಂದು ವರದಿಯಾಗಿದೆ.

ಅರ್ಧ ಲಕ್ಷದಷ್ಟು ರೈತರು ಈಗ ರಾಜಧಾನಿಯೆಡೆಗೆ ಹೊರಟಿದ್ದು ಗುರುವಾರ ಶುಕ್ರವಾರ ರೈತರ ಮೇಲೆ ಗ್ರೆನೆಡ್, ಅಶ್ರುವಾಯು, ವಾಟರ್ ಕ್ಯಾನನ್ ಪ್ರಯೋಗಿಸಲಾಗಿತ್ತು. ರೈತರು ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದರಿಂದ ದಿಲ್ಲಿಯ ಬುರಾರಯಿ ಮೈದಾನ ಪ್ರವೇಶಿಸಲು ಪೊಲೀಸರು ಅನುಮತಿ ನೀಡಿದ್ದಾರೆ. ಇದೇ ವೇಳೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಗತ್ಯವಾದ ಸಹಾಯ ನೀಡಲು ದಿಲ್ಲಿ ಸರಕಾರ ಅಧಿಕಾರಿಗಳಿಗೆ ತಿಳಿಸಿದೆ.

ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ರೈತರೊಂದಿಗೆ ಡಿಸೆಂಬರ್ ಮೂರಕ್ಕೆ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪುನಃ ತಿಳಿಸಿದ್ದಾರೆ. ಬೆಳೆ ಕೊಯ್ಲು ಮತ್ತು ಕೊರೋನ ಪರಿಗಣಿಸಿ ಪ್ರತಿಭಟನೆ ನಿಲ್ಲಿಸಬೇಕೆಂದು ಅವರು ರೈತರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತರು ನಿರ್ಧರಿಸಿದ್ದಾರೆ.