ಸನ್ಮಾರ್ಗ ವಾರ್ತೆ
ಮ್ಯಾಕ್ಸ್ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಯೋಜನೆಗಾಗಿ ಭೂಮಿಯನ್ನು ತೆರವುಗೊಳಿಸಲು ನಾಗರಿಕ ಅಧಿಕಾರಿಗಳು ಮುಂದಾಗಿದ್ದರಿಂದ, ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮದೀನಾ ಮಸೀದಿ ಮತ್ತು ಪಕ್ಕದ ಹಲವಾರು ವಸತಿ ರಚನೆಗಳು ಭಾಗಶಃ ಧ್ವಂಸಗೊಂಡಿವೆ.
ಮಸೀದಿಯ ಭಾಗಗಳು ಮತ್ತು ನಾಗರಿಕ ಅಧಿಕಾರಿಗಳಿಂದ ಒತ್ತುವರಿ ಎಂದು ಗುರುತಿಸಲ್ಪಟ್ಟ ರಚನೆಗಳನ್ನು ಕೆಡವುತ್ತಿದ್ದಂತೆ ತಡರಾತ್ರಿ ಬುಲ್ಡೋಜರ್ಗಳನ್ನು ನಿಯೋಜಿಸಲಾಯಿತು. ರಸ್ತೆ ತೆರವುಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಧ್ವಂಸಗೊಳಿಸುವ ಮೊದಲು ನೋಟೀಸುಗಳನ್ನು ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ನೋಟೀಸುಗಳನ್ನು ನೀಡಿದ ರೀತಿಗೆ ಮಸೀದಿ ಸಮಿತಿಯು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಕ್ರಿಯಿಸಲು ಅಥವಾ ಕಾನೂನು ಪರಿಹಾರವನ್ನು ಕೋರಲು ತನಗೆ ಅತ್ಯಲ್ಪ ಸಮಯವನ್ನು ನೀಡಲಾಗಿದೆ ಎಂದು ಆರೋಪಿಸಿದೆ.
ಮದೀನಾ ಮಸೀದಿಯ ಅಧ್ಯಕ್ಷ ಮೊಬಿನ್ ಖಾನ್ ಮಾತನಾಡಿ, ಸೂಕ್ತ ಪ್ರತಿಕ್ರಿಯೆಯನ್ನು ಸಿದ್ಧಪಡಿಸಲು ತಮ್ಮ ವಕೀಲರ ಸಲಹೆಯಂತೆ ಸಮಿತಿಯು ಆರಂಭದಲ್ಲಿ ದಾಖಲೆಗಳ ಸ್ಪಷ್ಟ ಪ್ರತಿಗಳನ್ನು ಕೋರಿತ್ತು ಎಂದರು.
“ವಕೀಲರ ಸಲಹೆಯ ಮೇರೆಗೆ, ಸೂಕ್ತ ಉತ್ತರವನ್ನು ರೂಪಿಸಲು ದಾಖಲೆಗಳ ಸ್ಪಷ್ಟ ಪ್ರತಿಗಳನ್ನು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಲಾಯಿತು” ಎಂದು ಮೊಬಿನ್ ಖಾನ್ ಹೇಳಿದರು. “ಆದರೆ ಈ ಮಧ್ಯೆ, ಎಂಡಿಸಿ (MCD) ಮೊದಲ ನೋಟೀಸ್, ನಂತರ ಎರಡನೇ ನೋಟೀಸ್ ಮತ್ತು 15 ದಿನಗಳಲ್ಲಿ ಧ್ವಂಸಗೊಳಿಸಲಾಗುವುದು ಎಂದು ತಿಳಿಸುವ ಮೂರನೇ ನೋಟೀಸ್ ಅನ್ನು ನೀಡಿತು.”
ಮೊಬಿನ್ ಖಾನ್ ಪ್ರಕಾರ, ಸಮಿತಿಯು ನಂತರ ಮೇಲ್ಮನವಿ ನ್ಯಾಯಮಂಡಳಿಯನ್ನು (Appellate Tribunal) ಸಂಪರ್ಕಿಸಿತು. ಮೊದಲ ವಿಚಾರಣೆಯ ಸಮಯದಲ್ಲಿ, ವಿದ್ಯುತ್ ಮೀಟರ್ ಹೊಂದಿದ್ದ ಮಸೀದಿಯ ಒಂದು ಮಹಡಿಯನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ವಾದಿಸಿದರು, ಆದರೆ ಉಳಿದ ರಚನೆಯನ್ನು ಹೊಸ ನಿರ್ಮಾಣವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಮೂರು ಮಹಡಿಗಳನ್ನು 2001ರಲ್ಲಿ ನಿರ್ಮಿಸಲಾಗಿದೆ ಎಂದು ತೋರಿಸುವ ಸೈಟ್ ನಕ್ಷೆಗಳನ್ನು ಸಮಿತಿಯು ನ್ಯಾಯಮಂಡಳಿಗೆ ಸಲ್ಲಿಸಿದೆ ಮತ್ತು ಗೋಡೆಗಳ ಮೇಲಿನ ಪ್ಲಾಸ್ಟರ್ನ ವಯಸ್ಸನ್ನು ಪರಿಶೀಲಿಸುವಂತೆ ಕೋರಿದೆ ಎಂದು ಖಾನ್ ಹೇಳಿದರು.
“ಗೋಡೆಗಳ ಮೇಲಿನ ಪ್ಲಾಸ್ಟರ್ನ ವಯಸ್ಸನ್ನು ಪರಿಶೀಲಿಸುವಂತೆ ನಾವು ಅವರನ್ನು ಕೇಳಿದ್ದೇವೆ ಮತ್ತು ನಾವು 2001 ರ ಹಿಂದೆಯೇ ಮೂರು ಮಹಡಿಗಳನ್ನು ನಿರ್ಮಿಸಿದ್ದೇವೆ ಎಂದು ಎತ್ತಿ ತೋರಿಸಿದ್ದೇವೆ ಮತ್ತು ಆ ಸೈಟ್ ನಕ್ಷೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ” ಎಂದು ಅವರು ಹೇಳಿದರು. ಮೇಲಿನ ಮಹಡಿಗಳನ್ನು ಕೆಡವಲು ಅನುಮತಿ ನೀಡುವ ಮೊದಲು ನ್ಯಾಯಮಂಡಳಿಯು ನಕ್ಷೆಗಳು ಮತ್ತು ವಾದಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದರು.
ಮದೀನಾ ಮಸೀದಿಯ ಇಮಾಮ್ ಝರಿಫುರ್ ರೆಹಮಾನ್ ಅವರು ಮಸೀದಿಯನ್ನು ಕಾನೂನುಬಾಹಿರ ಎಂದು ಯಾವ ಆಧಾರದ ಮೇಲೆ ವರ್ಗೀಕರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
“ಇದನ್ನು ಕಾನೂನುಬಾಹಿರ ಎಂದು ಕರೆಯಲಾಗುತ್ತಿದೆ, ಆದರೆ ಶಾಲಿಮಾರ್ನ ಪ್ರತಿಯೊಬ್ಬರೂ ಜನರಲ್ ಪವರ್ ಆಫ್ ಅಟಾರ್ನಿ (General power of attorney) ಹೊಂದಿದ್ದಾರೆ ಮತ್ತು ಈ ಪ್ರದೇಶದ ಪ್ರತಿಯೊಂದು ಮನೆಯೂ ಅದೇ ಪವರ್ ಆಫ್ ಅಟಾರ್ನಿ ಆಧಾರದ ಮೇಲೆ ನಿಂತಿದೆ; ಆದರೂ, ಮಸೀದಿಯನ್ನು ಮಾತ್ರ ಕಾನೂನುಬಾಹಿರ ಎಂದು ಪ್ರತ್ಯೇಕಿಸಲಾಗಿದೆ” ಎಂದು ಅವರು ಹೇಳಿದರು.
ಕಾನೂನು ಪ್ರಕ್ರಿಯೆಗಳಿಗೆ ಮಸೀದಿ ಸಮಿತಿಯು ಪ್ರತಿಕ್ರಿಯಿಸಿದೆ ಮತ್ತು ನ್ಯಾಯಾಲಯದ ನೋಟೀಸ್ ನಂತರ ಎಂಡಿಸಿ (MCD) ಮುಂದೆ ಹಾಜರಾಗಿದೆ ಎಂದು ರೆಹಮಾನ್ ಹೇಳಿದರು.
“ನಾವು ವಕೀಲರ ಮೂಲಕ ಮೊಕದ್ದಮೆಯನ್ನು ಹೂಡಿದ್ದೇವೆ ಮತ್ತು ಅಗತ್ಯವಿರುವ ಎಲ್ಲಾ ಉತ್ತರಗಳನ್ನು ಒದಗಿಸಿದ್ದೇವೆ, ಅದರ ನಂತರ ನ್ಯಾಯಾಲಯದಿಂದ ಎಂಡಿಸಿ (MCD) ಗೆ ನೋಟೀಸ್ ಜಾರಿಗೊಳಿಸಲಾಯಿತು” ಎಂದು ಅವರು ಹೇಳಿದರು.
“ಎಂಡಿಸಿ (MCD) ನಮ್ಮನ್ನು ವಿಚಾರಣೆಗೆ ಕರೆಸಿತು, ಅಲ್ಲಿ ನಾವು ಅವರಿಗೆ ಎಲ್ಲವನ್ನೂ ವಿವರಿಸಿದ್ದೇವೆ, ಆದರೆ ಇದೆಲ್ಲದರ ಹೊರತಾಗಿಯೂ, ಎಂಡಿಸಿ (MCD) ಮಸೀದಿಯನ್ನು ಕೆಡವಲು ಅಥವಾ ಪುರಸಭೆಯ ಕ್ರಮವನ್ನು ಎದುರಿಸಲು 15 ದಿನಗಳ ಗಡುವನ್ನು ನೀಡಿ ಮರುದಿನವೇ ನೋಟೀಸ್ ಜಾರಿಗೊಳಿಸಿತು.”
ತಡರಾತ್ರಿಯಲ್ಲಿ ಪ್ರಸ್ತಾವಿತ ಧ್ವಂಸದ ಬಗ್ಗೆ ತಿಳಿದ ನಂತರ, ಎಐಎಂಐಎಂ (AIMIM) ದೆಹಲಿ ರಾಜ್ಯ ಅಧ್ಯಕ್ಷ ಶೋಯೆಬ್ ಜಮೈ ಸ್ಥಳಕ್ಕೆ ತಲುಪಿದರು. ರಾತ್ರೋರಾತ್ರಿ ನಡೆಸಿದ ಈ ಧ್ವಂಸ ಕಾರ್ಯಾಚರಣೆಯನ್ನು ಅಸಂವಿಧಾನಿಕ ಎಂದು ಬಣ್ಣಿಸಿದ ಜಮೈ, ಈ ಕ್ರಮವನ್ನು ಉತ್ತರ ಪ್ರದೇಶದ ಸಹರಾನ್ಪುರ್ನಲ್ಲಿ ನಡೆದ ಹಿಂದಿನ ಧ್ವಂಸ ಘಟನೆಯೊಂದಿಗೆ ಹೋಲಿಸಿದರು.
ಈ ಪ್ರದೇಶದ ನಿವಾಸಿಗಳು ಸಹ ಧ್ವಂಸದ ಬಗ್ಗೆ, ವಿಶೇಷವಾಗಿ ಕಾರ್ಯಾಚರಣೆಯ ಸಮಯ ಮತ್ತು ಭಾರೀ ಪೊಲೀಸ್ ಪಡೆಯ ನಿಯೋಜನೆಯ ಬಗ್ಗೆ ತಮ್ಮ ಕೋಪ ಮತ್ತು ಆತಂಕವನ್ನು ವ್ಯಕ್ತಪಡಿಸಿದರು.
ಸಧ್ಯ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಮತ್ತು ಬುಲ್ಡೋಜರ್ಗಳನ್ನು ಸ್ಥಳದಿಂದ ತೆಗೆದುಹಾಕಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿರುವುದರಿಂದ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮುಂದುವರಿದಿದೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ.
ರಸ್ತೆ ವಿಸ್ತರಣೆ ಯೋಜನೆಗೆ ಅನುಕೂಲವಾಗುವಂತೆ ಧ್ವಂಸಗೊಳಿಸಲಾಗಿದೆ ಮತ್ತು ಕ್ರಮದ ಮೊದಲು ನೋಟೀಸುಗಳನ್ನು ನೀಡಲಾಗಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.ಈ ಮಧ್ಯೆ, ಮಸೀದಿ ಸಮಿತಿಯು ನೋಟಿಸ್ ಅವಧಿಯ ಸಮರ್ಪಕತೆಯನ್ನು ಮತ್ತು ಧ್ವಂಸಗೊಳಿಸುವ ಮೊದಲು ಅನುಸರಿಸಿದ ಕಾನೂನು ಪ್ರಕ್ರಿಯೆಯನ್ನು ಪ್ರಶ್ನಿಸಿದೆ.
https://x.com/shoaibJamei/status/2102541528044630125?ref_src=twsrc%5Etfw%7Ctwcamp%5Etweetembed%7Ctwterm%5E2102541528044630125%7Ctwgr%5Efa826b6ec71ce0721afcc92973010c405b8873b3%7Ctwcon%5Es1_c10&ref_url=https%3A%2F%2Fmaktoobmedia.com%2Fpost%3Fid%3D116517slug%3Dparts-of-mosque-adjoining-homes-demolished-overnight-in-delhis-shalimar-bagh-amid-heavy-police-deployment












